Nov 16, 2010

ಫೇಸ್‌ಬುಕ್‌ನಲ್ಲಿ ವಿಳಾಸ ನೀಡಿದ್ದರೆ ಎಚ್ಚರ !!!




ಫೇಸ್‌ಬುಕ್ ಮುಂತಾದ ಸಂಪರ್ಕ ತಾಣಗಳಲ್ಲಿ ನಿಮ್ಮ ವಿಳಾಸ, ವೈಯಕ್ತಿಕ ಮಾಹಿತಿ ಮತ್ತು ಗೆಳೆಯರು, ತಿರುಗಾಡುವ ತಾಣಗಳ ಬಗ್ಗೆ ಯಾವುದೇ ಸಂಕೋಚವಿಲ್ಲದೆ ಎಲ್ಲವನ್ನು ಬಿಚ್ಚಿಟ್ಟಿದ್ದರೆ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಯಾಕೆಂದರೆ ಕೆಲವರು ಇಂತಹ ಸಂಪರ್ಕ ತಾಣಗಳನ್ನು ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿರುವ ಅಂಶ ಬಹಿರಂಗವಾಗಿದೆ.

ನೀವು ಸಂಪರ್ಕ ತಾಣಗಳಲ್ಲಿ ಗೆಳೆಯರಿಗೆ ನಿಮ್ಮ ವಿಳಾಸ, ಹುಟ್ಟಿದ ದಿನಾಂಕ, ಓದಿದ ಶಾಲೆ, ಕಾಲೇಜುಗಳ ವಿವರಗಳನ್ನೆಲ್ಲ ನೀಡಿರುತ್ತೀರಿ. ಇದನ್ನೇ ಬಳಸಿಕೊಂಡು ಕೆಲವರು ನಕಲಿ ಗುರುತು ಪತ್ರ ಮಾಡಿ ಅದನ್ನು ದುಷ್ಕೃತ್ಯಗಳಿಗೆ ಬಳಸುತ್ತಿರುವ ಆತಂಕಕಾರಿ ಅಂಶ ಹೊರಬಿದ್ದಿದೆ. ಇದಕ್ಕಾಗಿ ಯಾವಾಗಲೂ ನಿಮ್ಮ ವಿಳಾಸವನ್ನು ಗೌಪ್ಯವಾಗಿಟ್ಟಿರಿ.

ಇಷ್ಟು ಮಾತ್ರವಲ್ಲದೆ ಕೆಲವರು ಸಂಪರ್ಕ ತಾಣಗಳಲ್ಲಿ ತಾನು ಪಿಕ್‌ನಿಕ್ ಮತ್ತು ವಿದೇಶಗಳಿಗೆ ಹೋಗುವ ಸಮಯ, ದಿನಾಂಕ ಉಳಿದುಕೊಳ್ಳುವ ದಿನಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿರುತ್ತಾರೆ. ಆದರೆ ಇದನ್ನೇ ಬಳಸಿಕೊಳ್ಳುವ ಕೆಲವೊಂದು ಜಾಲಗಳು ಕಳ್ಳತನಕ್ಕೆ ಸರಿಯಾದ ಸಂಚು ರೂಪಿಸಿ, ನಿಮ್ಮ ಮನೆಯನ್ನು ಕೊಳ್ಳೆ ಹೊಡೆಯಬಹುದು. ತುಂಬಾ ಗೌಪ್ಯವೆಂದು ಭಾವಿಸಲಾಗಿದ್ದ ಕೆಲವು ಸಂಪರ್ಕ ತಾಣಗಳನ್ನು ಈಗ ಕದ್ದು ಅದರ ಮಾಹಿತಿಗಳನ್ನು ಪಡೆಯುವ ಜಾಲಗಳು ಸಕ್ರಿಯವಾಗಿದೆ.

ಸಂಪರ್ಕ ತಾಣಗಳಲ್ಲಿ ಖಾತೆಗಳನ್ನು ಮಾಡಿ ಅದರಲ್ಲಿ ನಿಮ್ಮ ಕೆಲವು ವೀಕ್‌ನೆಸ್‌ಗಳನ್ನು ಬರೆದು ಅಥವಾ ಅಶ್ಲೀಲ ಚಿತ್ರಗಳು ಮತ್ತು ಫೋನ್ ನಂಬರ್ ಹಾಕಬೇಡಿ. ಯಾಕೆಂದರೆ ಇದನ್ನೇ ಬಳಸಿಕೊಂಡು ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಬಹುದು. ಇದು ಈಗ ನಿರಂತರವಾಗಿ ನಡೆಯುತ್ತಲೇ ಇದೆ. ಇದರಿಂದ ಹಲವಾರು ಮಂದಿ ವಂಚನೆಗೆ ಒಳಗಾದರೂ ಕೂಡ ದೂರು ನೀಡಿದರೆ ಪತ್ತೆ ಕಾರ‍್ಯ ಕಷ್ಟವಾಗಿರುವ ಕಾರಣ ಅಪರಾಧಿಗಳು ಸುಲಭವಾಗಿ ಪಾರಾಗುತ್ತಿದ್ದಾರೆ. ಕೆಲವರಿಗೆ ತಮ್ಮ ವೈಯಕ್ತಿಕ ವಿಚಾರಗಳನ್ನು ಇದ್ದೆಲ್ಲ ಸಂಪರ್ಕ ತಾಣಗಳಲ್ಲಿ ಹರಿದುಬಿಟ್ಟು ಬೇರೆಯವರು ತಮ್ಮ ಬಗ್ಗೆ ತಿಳಿದುಕೊಳ್ಳಲಿ ಎನ್ನುವ ತವಕ. ಇಂತಹವರು ಇನ್ನಾದರೂ ಎಚ್ಚೆತ್ತುಕೊಳ್ಳಲಿ.

No comments:

Post a Comment