ಭಾರತೀಯರ ಕಷ್ಟ ಸುಖಕ್ಕಾಗಿ ಆರೆಸ್ಸೆಸ್ ಬೀದಿಗಿಳಿದು ಹೋರಾಡಿದ ಒಂದೇ ಒಂದು ದಾಖಲೆ ನಮ್ಮ ಮುಂದಿಲ್ಲ. ಭಾರತೀಯರು ಎಂದಾಗ ಕ್ರಿಶ್ಚಿಯನ್ನರು, ಮುಸಲ್ಮಾನರು, ದಲಿತರು, ಬೌದ್ಧರು ಮೊದಲಾದವರು ಆರೆಸ್ಸೆಸ್ಸಿಗರಿಗೆ ಸಮಸ್ಯೆಯಾಗಬಹುದು. ಕನಿಷ್ಠ ‘ಹಿಂದೂ’ಗಳ ಅಕ್ಕಿ ಬೇಳೆ ಸಮಸ್ಯೆಗಳಿಗಾಗಿಯಾದರೂ ಅವರು ಪ್ರತಿಭಟನೆ ನಡೆಸಿದ್ದಾರೆಯೋ ಎಂದು ದಾಖಲೆಗಳನ್ನು ತಿರುವಿದರೆ ಅಲ್ಲೂ ನಮಗೆ ನಿರಾಸೆಯಾಗುತ್ತದೆ. ಇಂತಹ ಆರೆಸ್ಸೆಸ್ ಬುಧವಾರ ದೇಶಾದ್ಯಂತ ಪ್ರತಿಭಟನೆ ನಡೆಸಿದೆ.
ಕೊನೆಗಾದರೂ ಆರೆಸ್ಸೆಸ್ ಎನ್ನುವ ಸ್ವಯಂಘೋಷಿತ ‘ಹಿಂದೂ ಸಂಘಟನೆ’ ಎಚ್ಚರಗೊಂಡಿತೇ ಎಂದು ಹಿಂದೂಗಳು ಸಂತೋಷ ಪಡುವಂತಿಲ್ಲ. ಯಾಕೆಂದರೆ, ಜನಸಾಮಾನ್ಯರ ಕಷ್ಟ, ನಷ್ಟಗಳನ್ನು ಮುಂದಿಟ್ಟು ಅವರು ಪ್ರತಿಭಟನೆ ನಡೆಸಿಲ್ಲ. ಬದಲಿಗೆ, ದೇಶವಿರೋಧಿ ಚಟುವಟಿಕೆ ನಡೆಸಿದ ಆರೋಪ ಹೊತ್ತಿರುವ ತನ್ನ ಸಹೋದ್ಯೋಗಿ ಪರವಾಗಿ ಈ ಚಳವಳಿಯನ್ನು ಹಮ್ಮಿಕೊಂಡಿತ್ತು.
ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ರನ್ನು ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದಲ್ಲಿ ಹೆಸರಿಸಿರುವುದು ಯಾವುದೇ ಸಾಮಾನ್ಯ ಪೊಲೀಸ್ ಅಥವಾ ಸಿಒಡಿ ಸಿಬ್ಬಂದಿಗಳಲ್ಲ. ಈ ದೇಶದ ಭಯೋತ್ಪಾದನಾ ಚಟುವಟಿಕೆಗಳ ಹಿಂದಿರುವ ದೇಶದ್ರೋಹಿಗಳ ಜಾಲವನ್ನು ಪತ್ತೆ ಹಚ್ಚುವುದಕ್ಕಾಗಿಯೇ ನೇಮಕವಾಗಿರುವ ಭಯೋತ್ಪಾದಕ ವಿರೋಧಿ ದಳ (ಎಟಿಎಸ್)ನವರು ಅಜ್ಮೀರ್ ದರ್ಗಾ ಸ್ಪೋಟದಲ್ಲಿ ಇಂದ್ರೇಶ್ ಪಾತ್ರವನ್ನು ಬಹಿರಂಗಪಡಿಸಿದ್ದಾರೆ.
ಅವರು ಭಯೋತ್ಪಾದಕರನ್ನು ಬಂಧಿಸುವುದು, ಭಯೋತ್ಪಾದಕ ಜಾಲವನ್ನು ಭೇದಿಸುತ್ತಿರುವುದು ದೇಶದಲ್ಲಿ ಇದೇ ಮೊದಲ ಬಾರಿಯೇನೂ ಅಲ್ಲ. ಹಲವು ಸ್ಫೋಟ ತನಿಖೆಗಳನ್ನು ಕೈಗೆತ್ತಿಕೊಂಡಿರುವ ಎಟಿಎಸ್, ನೂರಾರು ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಂಡಿದೆ, ಬಂಧಿಸಿದೆ. ಆಗೆಲ್ಲ ಆರೆಸ್ಸೆಸ್ ಸಂಘಟನೆಯು, ಎಟಿಎಸ್ನ ಕಾರ್ಯವೈಖರಿಯನ್ನು ಶ್ಲಾಘಿಸಿತ್ತು. ಭಯೋತ್ಪಾದಕರನ್ನು ಮುಂದಿಟ್ಟುಕೊಂಡು ತನ್ನ ದೇಶಪ್ರೇಮವನ್ನು ಪ್ರಕಟಪಡಿಸಲು ಹಲವು ‘ನಾಟಕ’ಗಳನ್ನು ಮಾಡಿತ್ತು. ದೇಶಪ್ರೇಮದ ಹೆಸರಿನಲ್ಲಿ ದೇಶವನ್ನು ಒಡೆಯುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿತ್ತು.
ಆದರೆ ಯಾವಾಗ, ಹೇಮಂತ ಕರ್ಕರೆ ನೇತತ್ವದ ಎಟಿಎಸ್ ತಂಡ, ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿ ಸಂಘಪರಿವಾರದ ಮುಖಂಡರನ್ನು ಒಬ್ಬೊಬ್ಬರನ್ನಾಗಿ ಬಂಧಿಸಲು ಮುಂದಾಯಿತೋ, ಆಗ ಆರೆಸ್ಸೆಸ್ ಬೆಚ್ಚಿ ಬಿತ್ತು. ಈವರೆಗೆ ದೇಶಪ್ರೇಮಿ ಮುಖವಾಡದಲ್ಲಿ ಓಡಾಡುತ್ತಿದ್ದವರೇ ದೇಶದ್ರೋಹಿಗಳಾಗಿ ಗುರುತಿಸಲ್ಪಡಲು ಪ್ರಾರಂಭವಾದಾಗ ಆರೆಸ್ಸೆಸ್ ಮಾಡಿದ ಮೊದಲ ಕೆಲಸ, ‘ಬಂಧಿತರಿಗೂ ತನಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿಕೆ ನೀಡಿದ್ದು. ಆ ಹೇಳಿಕೆಯನ್ನು ನಾವು ಮನ್ನಿಸೋಣ. ಆದರೆ ತನಿಖೆ ಇನ್ನಷ್ಟು ಆಳಕ್ಕೆ ಹೋದಂತೆ, ಒಂದು ಕೆಟ್ಟ ರಾತ್ರಿ ಹೇಮಂತ ಕರ್ಕರೆ ಮತ್ತು ಅವರ ತಂಡ ಬರ್ಬರವಾಗಿ ಕೊಲ್ಲಲ್ಪಟ್ಟರು.
ಮಾಲೆಗಾಂವ್ ಸ್ಫೋಟದ ಹಿಂದಿದ್ದ ಭಯೋತ್ಪಾದಕರಿಗೆ ಈ ಕಗ್ಗೊಲೆ ಭಾರೀ ಲಾಭವನ್ನು ತಂದಿತು. ಆದರೆ ಕರ್ಕರೆ ತಂಡದ ಬರ್ಬರ ಹತ್ಯೆಯೊಂದಿಗೆ ತನಿಖೆ ಮುಗಿದು ಹೋಗಲಿಲ್ಲ. ಅಜ್ಮೀರ್ ಸ್ಫೋಟ, ಮಾಲೆಗಾಂವ್ ಸ್ಫೋಟ ಸೇರಿದಂತೆ ಹಲವು ಭಯೋತ್ಪಾದಕ ಕತ್ಯಗಳಿಗೆ ಸಂಬಂಧಿಸಿದಂತೆ ಸಂಘಪರಿವಾರದ ಸಾಲುಸಾಲು ನಾಯಕರ ಹೆಸರುಗಳು ಹೊರಬೀಳ ತೊಡಗಿದವು. ಅಂತಿಮವಾಗಿ, ಅವರೊಂದಿಗೆ ಆರೆಸ್ಸೆಸ್ನ ನಾಯಕರು ನೇರ ಸಂಬಂಧವನ್ನು ಹೊಂದಿದ್ದರು ಎನ್ನುವುದೂ ಬಹಿರಂಗವಾಯಿತು. ಅಜ್ಮೀರ್ ಸ್ಪೋಟದಲ್ಲಿ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಪಾತ್ರದ ಉಲ್ಲೇಖ ಇರುವ ದೋಷಾರೋಪ ಪಟ್ಟಿಯೂ ಸಲ್ಲಿಕೆಯಾಯಿತು.
ಆರೆಸ್ಸೆಸ್ ತನ್ನನ್ನು ತಾನು ‘ದೇಶಪ್ರೇಮಿ’ ಸಂಘಟನೆ ಎಂದು ಕರೆದುಕೊಳ್ಳುತ್ತದೆ. ದೇಶ ವಿರೋಧಿ ಚಟುವಟಿಕೆಯನ್ನು ನಡೆಸಿದ ಯಾವನೇ ಆದರೂ, ಅದು ಆರೆಸ್ಸೆಸ್ ಕಾರ್ಯಕರ್ತನೇ ಆಗಿದ್ದರೂ ಅವರನ್ನು ಆರೆಸ್ಸೆಸ್ ಸಮರ್ಥಿಸಬಾರದಿತ್ತು. ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪವನ್ನು ಯಾರೇ ಹೊತ್ತರೂ ಆ ಕುರಿತಂತೆ ಸಮಗ್ರ ತನಿಖೆ ನಡೆಯಬೇಕು ಮತ್ತು ಆರೋಪ ಸಾಬೀತಾದರೆ ಆತನಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಆರೆಸ್ಸೆಸ್ ಹೇಳಿಕೆ ನೀಡಬೇಕಾಗಿತ್ತು.
ಸಣ್ಣ ಪುಟ್ಟ ಕಾರ್ಯಕರ್ತರ ಬಂಧನವಾದಾಗ ಆರೆಸ್ಸೆಸ್ ಇಂತಹದೇ ಹೇಳಿಕೆಯನ್ನು ನೀಡಿತ್ತು. ಆದರೆ ಯಾವಾಗ ಆರೆಸ್ಸೆಸ್ನ ಬುಡಕ್ಕೇ ಎಟಿಎಸ್ ಕೈ ಹಾಕಿತೋ, ನಾಯಕನನ್ನೇ ಬಂಧಿಸಲು ಮುಂದಾಯಿತೋ ಆಗ, ಆರೆಸ್ಸೆಸ್ ಆತನ ಬೆಂಬಲಕ್ಕೆ ನಿಂತಿತು. ‘ಇಂದ್ರೇಶ್ ಕುಮಾರ್ ನಿರಪರಾಧಿ, ಆತನನ್ನು ಸಿಲುಕಿಸಲಾಗಿದೆ, ಎಂಬಿತ್ಯಾದಿಯಾಗಿ ಹೇಳಿಕೆ ನೀಡತೊಡಗಿತು. ಬುಧವಾರ ಆತನನ್ನು ಬೆಂಬಲಿಸಿ, ದೇಶಾದ್ಯಂತ ಪ್ರತಿಭಟನೆಯನ್ನೂ ಹಮ್ಮಿಕೊಂಡಿದೆ.
ಈ ದೇಶದಲ್ಲಿ ಈವರೆಗೆ ಹಲವು ಭಯೋತ್ಪಾದಕರನ್ನು, ಉಗ್ರರನ್ನು ಬಂಧಿಸಲಾಗಿದೆ. ಆದರೆ ಅವರ ಪರವಾಗಿ ಸಾರ್ವಜನಿಕವಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡ ಒಂದೇ ಒಂದು ಉದಾಹರಣೆ ನಮ್ಮ ಮುಂದಿಲ್ಲ. ಆದರೆ ‘ದೇಶಪ್ರೇಮಿ’ ಎಂದು ತನ್ನನ್ನು ತಾನು ಕರೆಸಿಕೊಳ್ಳುವ ಆರೆಸ್ಸೆಸ್ ಪ್ರಪ್ರಥಮವಾಗಿ ಭಯೋತ್ಪಾದನೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪರವಾಗಿ ನಿಂತಿದೆ. ಮಾತ್ರವಲ್ಲ, ದೇಶಾದ್ಯಂತ ಪ್ರತಿಭಟನೆ ನಡೆಸಿದೆ. ಇಂದ್ರೇಶ್ ಕುಮಾರ್ ವಿರುದ್ಧ ಎಟಿಎಸ್ ಸಾಕ್ಷಾಧಾರಗಳನ್ನು ಸಂಗ್ರಹಿಸಿದೆ.
ಬಂಧಿತ ಆರೋಪಿಗಳೊಂದಿಗೆ ಆತನ ಸಂಬಂಧವನ್ನು ಗುರುತಿಸಿದ ಬಳಿಕವಷ್ಟೇ ಆತನ ಹೆಸರನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. ಆದರೆ ಇನ್ನೂ ಆತನ ಬಂಧನವಾಗಿಲ್ಲ. ಎಟಿಎಸ್ನ ತನಿಖೆಯ ದಾರಿ ತಪ್ಪಿಸುವುದೇ ಈ ಪ್ರತಿಭಟನೆಯ ಸ್ಪಷ್ಟ ಉದ್ದೇಶ. ಸಾಕ್ಷಗಳು ಇಂದ್ರೇಶ್ಗೆ ವಿರುದ್ಧವಾಗಿದ್ದುದರಿಂದ, ಹೊರಗಿನ ಒತ್ತಡದ ಮೂಲಕ ಆತನನ್ನು ರಕ್ಷಿಸಲು ಆರೆಸ್ಸೆಸ್ ಹೊರಟಿದೆ. ದೇಶದ್ರೋಹಿ ಪಟ್ಟಿಯಲ್ಲಿರುವ ವ್ಯಕ್ತಿಯ ಹಿಂದೆ ನಿಲ್ಲುವ ಮೂಲಕ ಇಡೀ ಸಂಘಟನೆಯೇ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎನ್ನುವುದನ್ನು ಈ ಮೂಲಕ ಸಾಬೀತು ಪಡಿಸಿದೆ.
‘ಇಂದ್ರೇಶ್ ಕುಮಾರ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಕೇಂದ್ರ ಸರಕಾರದ ಕೈವಾಡವಿದೆ’ ಎಂದು ಆರೆಸ್ಸೆಸ್ ಬೊಗಳೆ ಬಿಡುತ್ತಿದೆ. ಇಂದು ಆರೆಸ್ಸೆಸ್ನ ಮುಖಂಡರೆಂದು ಕರೆಸಿಕೊಂಡ ಹೆಚ್ಚಿನ ನಾಯಕರು ಹಾಗೂ ಕಾರ್ಯಕರ್ತರು ಸಾರ್ವಜನಿಕವಾಗಿ ಓಡಾಡುತ್ತಿರುವುದೇ ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಕಪೆಯಿಂದ. ಈ ದೇಶದಲ್ಲಿ ಸಂವಿಧಾನವನ್ನು ಪ್ರಾಮಾಣಿಕವಾಗಿ ನಂಬಿರುವ ರಾಜಕೀಯ ಪಕ್ಷ ಆಡಳಿತಕ್ಕೆ ಬಂದಿದ್ದರೆ ಆರೆಸ್ಸೆಸ್ ಎಂದೋ ನಿಷೇಧಿಸಲ್ಪಡುತ್ತಿತ್ತು ಮತ್ತು ಇಂದ್ರೇಶ್ ಮಾತ್ರವಲ್ಲ, ಆರೆಸ್ಸೆಸ್ನ ಹೆಚ್ಚಿನ ನಾಯಕರೂ ಭಯೋತ್ಪಾದಕ ಚಟುವಟಿಕೆಯ ಆರೋಪದಲ್ಲಿ ಜೈಲು ಸೇರುತ್ತಿದ್ದರು.
ಇಂದು ಆರೆಸ್ಸೆಸ್ ಈ ಮಟ್ಟಿಗೆ ಬೆಳೆಯುವುದಕ್ಕೆ ಕಾರಣ ಬಿಜೆಪಿ ಪಕ್ಷವಲ್ಲ, ಸೆಕ್ಯುಲರ್ ಎಂದು ಕರೆಸಿಕೊಳ್ಳುವ ಕಾಂಗ್ರೆಸ್. ಆದುದರಿಂದ ಯಾವ ಕಾರಣಕ್ಕೂ ಆರೆಸ್ಸೆಸ್ನ ಒತ್ತಡಕ್ಕೆ ಎಟಿಎಸ್ ಮಣಿಯಬಾರದು. ಅಜ್ಮೀರ್ ಸ್ಫೋಟ ಸೇರಿದಂತೆ ಈ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಿದವರು ಯಾವುದೇ ಧರ್ಮ, ಸಂಘಟನೆಗೆ ಸೇರಿರಲಿ, ಅವರ ಬಂಧನವಾಗಲೇಬೇಕು. ಆರೆಸ್ಸೆಸ್ನ ಹುತ್ತದಲ್ಲಿ ಬಚ್ಚಿಟ್ಟುಕ್ಕೊಂಡಿರುವ ಇನ್ನಷ್ಟು ಇಂದ್ರೇಶ್ಗಳನ್ನು ಹೊರಗೆಳೆದು ಬಡಿದು ಹಾಕುವುದು ಎಟಿಎಸ್ನ ಕರ್ತವ್ಯ. ಆ ಕರ್ತವ್ಯದಲ್ಲಿ ಎಟಿಎಸ್ ಸಿಬ್ಬಂದಿ ಯಶಸ್ವಿಯಾಗಲಿ. ವಿದ್ರೋಹಿಗಳ ಸಂಚುಗಳಿಂದ ಮುಕ್ತವಾದ ಭಾರತ ನಮ್ಮದಾಗಲಿ.
HM HARISMALAR
No comments:
Post a Comment