Nov 12, 2010

ಇಂಥದ್ದೊಂದು ವಿಭಜನೆ ಆಗಿ ಹೋದರೆ

ಇಡೀ ವಿಶ್ವ ಆ ದಿನ ಆ ತೀರ್ಪಿನ ಬಗ್ಗೆ ಕಣ್ಣರಳಿಸಿ, ಕಿವಿಯರಳಿಸಿ ಕುಳಿತ್ತಿದ್ದರೆ ಹಿಂದೆ ಅತ್ಯಂತ ದೊಡ್ಡ ಸತ್ಯವೊಂದಿತ್ತು.

ಭಾವನಾತ್ಮಕ ವಿಚಾರಗಳಿದ್ದವು. ನಂಬಿಕೆಯ ಪಂಚಾಂಗಗಳಿದ್ದವು. ಈ ಎಲ್ಲಾ ಕಾರಣಗಳಿಗಾಗಿ ಆ ತೀರ್ಪು ಒಂದಿಷ್ಟು ವೃತಿರಿಕ್ತವಾಗಿ ಹೋಗುತ್ತಿದ್ದಾರೆ. ಅಲ್ಲಿ ಸಂಘರ್ಷಮಯ ವಾತಾವರಣ ಸೃಷ್ಟಿಯಾಗುವ ಎಲ್ಲಾ ಸಾಧ್ಯತೆಗಳು ಬಲವಾಗಿದ್ದವು.

ಆದರೆ ಅಲಹಾಬಾದ್ ಹೈಕೋರ್ಟ್ ತನ್ನ ಜಾಣತನದ ವಕಾಲತ್ತನ್ನು ಆ ದಿನ ಜಗಜ್ಜಾಹೀರಗೊಳಿಸಿತು. ಅದು ಹಾವನ್ನೂ ಸಾಯಿಸಲಿಲ್ಲ ಕೋಲನ್ನೂ ಮುರಿಸಲಿಲ್ಲ. ಯಾವ ಮೂರು ಪಾರ್ಟಿಗಳು ವಿವಾದಾತ್ಮಕ ಜಾಗದ ಹಕ್ಕುಪತ್ರ ತಮ್ಮದಾಗದೆಂಬ ಹಠಕ್ಕೆ ಬಿದ್ದಿದ್ದವೋ ಆ ಮೂರು ಪಾರ್ಟಿಗಳನ್ನು ಸಮಾಧಾನ ಪಡಿಸುವ ಆರ್ಥಾತ್ ಆ ಮೂರು ಪಾರ್ಟಿಗಳು ತಮ್ಮೊಳಗೆ ಪ್ರಶ್ನಾರ್ಥಕ ಚಿಹ್ನೆಯಿಂದ ನೋಡಿಕೊಂಡು ಗೊಂದಲ ಕ್ಕೊಳಗಾಗುವಂತೆ ಮಾಡುವ ಅತ್ಯಂತ ಬುದ್ದಿವಂತಿಕೆಯ ನಿರ್ಧಾರ ವೊಂದಕ್ಕೆ ಆ ದಿನ ಅಲಹಾಬಾದ್ ಹೈಕೋರ್ಟ್ ಬಂದಿತ್ತು. ನಮಗೆ ನಿಮಗೆಲ್ಲ ಗೊತ್ತಿರುವ ಹಾಗೆ ಆ ವಿವಾದಾತ್ಮಕ ಜಾಗ ಈಗ ಈ ಮೂರು ಭಾಗವಾಗಿದೆ. ಆ ಜಾಗದಲ್ಲಿ ಮುಸ್ಲಿಂ ಸಮಾಜದವರಿಗೆ ಮಸೀದಿ, ಹಿಂದೂ ಭಕ್ತರಿಗೆ ರಾಮಮಂದಿರ ರಚಿಸುವುದರ ಜೊತೆಗೆ ಈ ಪ್ರಕರಣದ ಇನ್ನೊಂದು ಪ್ರಮುಖ ಕಕ್ಷಿಯಾದ ನಿರ್ಮೋಹಿ ಅಖಂಡಕ್ಕೆ ಈ ಜಾಗದಲ್ಲೇ ಒಂದಷ್ಟು ಭೂಮಿಯನ್ನು ಪಾಲು ಮಾಡಿಕೊಡುವ ಮೂಲಕ ಈ ಪ್ರಕರಣದ ಪ್ರಮುಖ ಕಕ್ಷಿಗಳೇ ಮುಖ ಮುಖ ನೋಡಿಕೊಳ್ಳುವ ಹಾಗೆ ಹೈ ಕೋರ್ಟ್ ಮಾಡಿದೆ. ಹೈಕೋರ್ಟ್ ಆ ದಿನ ಈ ಮಹತ್ವದ ತೀರ್ಪನ್ನು ಪ್ರಕಟಪಡಿಸುವಾಗ ಅಲ್ಲಿ ಅಷ್ಟೇನೂ ವಾದ ಪ್ರತಿವಾದದ ವಾತಾವರಣ ಇರಲಿಲ್ಲ. ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿಗೆ ಮೇಲ್ಮನವಿ ಮಾಡ ಬಹುದೆಂಬ ಸಮಾಧಾನ ಅಲ್ಲಿತ್ತಾದರೆ ತೀರ್ಪನ್ನು ಸ್ಪಷ್ಟವಾಗಿ ಓದದೆ ಯಾವುದೇ ನಿಲುವಿಗೆ ಬುದ್ದಿವಂತ ಎರಡು ಧರ್ಮಗಳ ಮುಂಚೂಣಿ ನಾಯಕರು ಅಂಟಿಕೊಂಡದ್ದನ್ನು ಇಲ್ಲಿ ಸ್ವಾಗತಿಸಬೇಕಾಗುತ್ತದೆ. ಆದರೆ ಈಗ ಈ ತೀರ್ಪು ಸ್ವಲ್ಪ ಬಿಗು ಪಡೆದು ಕೊಂಡಿದೆ. ವಿಪರ್ಯಾಸವೆಂದರೆ ಮಂದಿರಕ್ಕೆ ಸಂಬಂಧಪಟ್ಟು ಹಿಂದುಗಳ ಮಧ್ಯೆ ಮಸೀದಿಗೆ ಸಂಬಂಧಪಟ್ಟು ಮುಸ್ಲಿಮರ ಮಧ್ಯೆ ಪರಸ್ಪರ ಭಿನ್ನಮತ ಉಂಟಾಗುವಷ್ಟರ ಮಟ್ಟಿಗೆ ಈ ಕಾವು ಮುಂದುವರಿದಿದೆ.

ನಿರ್ಮೋಹಿ ಅಖಾಡ ಎಂಬ ಹಿಂದೂ ಸಂತರ ಒಂದು ಪರಿವಾರ ರಾಮಭೂಮಿ ಮತ್ತು ಬಾಬರಿ ಮಸೀದಿ ವಿವಾದಕ್ಕೆ ಕೋರ್ಟಿನ ಹೊರಗೆ ಸೌಹಾರ್ದ ಪರಿಹಾರ ಹುಡುಕಬೇಕೆಂಬ ಪ್ರಾಮಾಣಿಕ ಅಭಿಪ್ರಾಯ ಹೇಳಿರುವುದು ಅಖಂಡ ಭಾರತ ಹಿಂದೂ ಮಹಾಸಭಾಕ್ಕೆ ಒಪ್ಪಿಗೆಯಾಗಿಲ್ಲ. ಇಡೀ ನಿವೇಶನ ಹಿಂದೂ ಸಮುದಾಯಕ್ಕೆ ಸೇರಿದ್ದು, ನಿವೇಶನವನ್ನು ವಿಭಜಿಸಲು ನಾವು ಒಪ್ಪುವುದಿಲ್ಲ ಎಂದು ಮಹಾಸಭಾದ ಉತ್ತರ ಪ್ರದೇಶ ರಾಜ್ಯಾಧ್ಯಕ್ಷ ಕಮಲೇಶ್ ತಿವಾರಿ ಅವರು ಈ ಪ್ರಕರಣ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಘರ್ಷದ ಹಾದಿ ಯಲ್ಲಿ ಸಾಗುವ ಸುಳಿವು ನೀಡಿದ್ದಾರೆ. ತಿವಾರಿ ಅವರ ಈ ಸಂಘರ್ಷದ ಅಭಿಪ್ರಾಯಕ್ಕೆ ಮೊದಲು ಅಯೋಧ್ಯೆ ಭೂ ಒಡೆತನದ ಮೂವರು ಪ್ರಧಾನ ಕಕ್ಷಿಗಳಾದ ರಾಮಜನ್ಮ ಭೂಮಿ ಟ್ರಸ್ಟ್, ಹಾಶಿಂ ಅನ್ಸಾರಿ, ಮತ್ತು ನಿರ್ಮೋಹಿ ಅಖಾಡ ಸೌಹಾರ್ದ ಪರಿಹಾರಕ್ಕೆ ಸೂತ್ರವೊಂದನ್ನು ಕಂಡು ಹಿಡಿಯುವುದರ ಬಗ್ಗೆ ಚರ್ಚೆ ನಡೆಸಿತ್ತಾದರೂ ಮಹಾಸಭಾ ಈಗ ಇಡೀ ನಿವೇಶನ ಹಿಂದೂ ಸಮುದಾಯದ್ದೆಂಬ ಬಿಗಿ ನಿಲುವಿಗೆ ಅಂಟಿಕೊಂಡಿರುವುದರಿಂದ ಎಲ್ಲರೂ ಬಯಸುವ ‘ಸೌಹಾರ್ದ ಪರಿಹಾರ’ವೆಂಬ ರಾಜಿ ಸೂತ್ರ ಅಸಾಧ್ಯ ಎಂಬುದು ಇದೀಗ ಸ್ಪಷ್ಟವಾಗಿದೆ.

ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಈ ಭೂಮಿ ಮೇಲಿನ ಹಕ್ಕು ಸ್ಥಾಪನೆ ಹಿಂತೆಗೆದುಕೊಂಡರೆ ಪರಸ್ಪರ ಮಾತುಕತೆಗೆ ಸಿದ್ಧ ಎಂಬ ಮಹಾಸಭಾದ ಏಕೈಕ ಶರ್ತ ಮತ್ತೆ ಹಿಂದೂ ಮತ್ತು ಮುಸ್ಲಿಮರ ಮಧ್ಯೆ ವಿವಾದ ಮುಂದುವರಿಸುವುದರ ಸೂಚನೆ ನೀಡಿರುವುದು ಆರೋಗ್ಯಕರ ಬೆಳವಣಿಗಯಲ್ಲ. ಈ ಜಾಗದ ಹಕ್ಕು ವಾಪಾಸು ತಕ್ಕೊಂಡರೆ ನಾವು ಮಸೀದಿ ನಿರ್ಮಾಣಕ್ಕೆ ಬೇರೆ ಕಡೆ ಇಮ್ಮಡಿ ಭೂಮಿ ನೀಡುವೆವು ಎಂಬ ಮಹಾಸಭಾದ ಅಭಿಪ್ರಾಯ ಸೌಹಾರ್ದ ಪರಿಹಾರದ ಸೂಚನೆಯೇ ಅನ್ನುವುದಕ್ಕಿಂತಲೂ ಸುನ್ನಿಸೆಂಟ್ರಲ್ ವಕ್ಫ್ ಮಂಡಳಿ ಅದೇ ಜಾಗದಲ್ಲಿ ಮಸೀದಿ ನಿರ್ಮಾಣವಾಗಬೇಕೆಂಬ ನೆಲೆಯಲ್ಲಿ ಮಸೀದಿ ನಿರ್ಮಾಣ ಪರ ಹೈಕೋರ್ಟ್ ಒಂದಷ್ಟು ಪೂರಕ ತೀರ್ಪನ್ನು ನೀಡಿರುವ ಅಂಶಗಳನ್ನು ಗಮನಿಸಿದಾಗ ವಕ್ಫ್ ಮಂಡಳಿಯು ಮಹಾಸಭಾದ ರಾಜಿ ಶರ್ತಕ್ಕೆ ಮಣೆ ಹಾಕಲು ಅವಕಾಶ ಭಾರೀ ಕಮ್ಮಿ.

ಇನ್ನೊಂದು ವಿಚಿತ್ರ ಬೆಳವಣಿಗೆಯೆಂದರೆ ಅಯೋಧ್ಯೆ ಭೂ ಒಡೆತನ ದಾವೆಯಲ್ಲಿ ಮಸೀದಿ ಪರ ಹಾಕಿಂ ಅನ್ಸಾರಿ ಅವರು ಸೌಹಾರ್ದದ ಬಗ್ಗೆ ಆಗಾಗ ಮಾತನಾಡುವುದು ಮತ್ತು ನಿರ್ಮೋಹಿ ಅಖಾಡದ ಅಧ್ಯಕ್ಷ ಮಹಂತಿ ಭಾಸ್ಕರ ದಾಸ್ ಅವರನ್ನು ಆಗಾಗ ಭೇಟಿಯಾಗುತ್ತಿರುವುದು ಹಾಗೂ ಹನುಮಾನ್ ಗಡಿಯ ಮಹಂತಿ, ಅಖಂಡ ಭಾರತೀಯ ಅಖಂಡ ಪರಿಷತ್ ಅಧ್ಯಕ್ಷ ಮಹಂತಿ ಜ್ಞಾನದಾಸ್ ಅವರನ್ನು ಅಕ್ಟೋಬರ್ ಮೂರರಂದು ಭೇಟಿಯಾಗಿರುವುದು ಹಾಜಿ ಮೊಹಬೂಬ್ ಅವರನ್ನು ಕೆರಳಿಸಿದೆ. ಇಡೀ ಮುಸ್ಲಿಂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅನ್ಸಾರಿಯವರು ಸೌಹಾರ್ದ ಪರಿಹಾರದ ಬಗ್ಗೆ ಏಕೆ ಮಾತನಾಡುತ್ತಿದ್ದಾರೆ? ಅನ್ಸಾರಿಯವರು ಕೆಲವರ ಕೈಗೊಂಬೆಯಾಗಿದ್ದಾರೆ ಎಂದು ಮೆಹಬೂಬ್ ಟೀಕಿಸುತ್ತಿದ್ದಾರೆ. ಮೆಹಬೂಬ್ ಅವರ ಭಾಷೆಯ ‘ಕೆಲವರು’ ಎಂಬ ಪದದಲ್ಲಿ ಹಿಂದುಗಳು ಅಡಕವಾಗಿರುವುದರಿಂದ ಹಿಂದೂ, ಮುಸ್ಲಿಂ ಎಂಬ ಭಾರತ ಭೂಮಿಯ ಭಾವನಾತ್ಮಕ ಪದಗಳು ಮತ್ತೆ ವಿರುದ್ಧ ದಿಕ್ಕಿನಲ್ಲಿ ಸಾಗುವುದರ ಸುಳಿವು ನೀಡುತ್ತಿರುವುದು ದುರಂತವೇ ಸರಿ. ಈ ಎಲ್ಲಾ ಬೆಳವ ಣಿಗೆಗಳಲ್ಲಿ ಒಂದಂತು ಸ್ಪಷ್ಟ. ರಾಮಮಂದಿರ ಅದೇ ವಿಶಾಲ ಜಾಗದಲ್ಲಿ ಮಸೀದಿಯ ಕನಿಷ್ಠ ಬಾಂಗ್ ಕೂಡಾ ಕೇಳದ ಸ್ಥಿತಿಯಲ್ಲಿ ನಿರ್ಮಾಣವಾಗಬೇಕೆನ್ನುವ ಹಿಂದೂ ಮಹಾ ಸಭಾ ಈ ಉದ್ಧೇಶಕ್ಕಾಗಿ ತನ್ನದೇ ಪರಿವಾರದ ಸಂತರುಳ್ಳ ನಿರ್ಮೋಹಿ ಅಖಾಡವನ್ನು ಎದುರು ಹಾಕಿಕೊಳ್ಳುತ್ತಿದ್ದರೆ ಸೌಹಾರ್ದ ಪರಿಹಾರಕ್ಕೆ ಪ್ರಯತ್ನಿಸುವ ಹಾಶಿಂ ಅನ್ಸಾರಿ ಬಗ್ಗೆ ಸುನ್ನಿ ವಕ್ಫ್ ಮಂಡಳಿಗೆ ವಿಶ್ವಾಸವಿಲ್ಲ.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಈವರೆಗೆ ಅಯೋಧ್ಯೆಯ ವಿವಾದ ಹಿಂದೂ ಮತ್ತು ಮುಸ್ಲಿಮರಿಗೆ ಸಂಬಂಧಿಸಿದ್ದಾಗಿತ್ತು. ಇದೀಗ ಹಿಂದೂಗಳೊಳಗೆ ಮತ್ತು ಮುಸ್ಲಿಮರೊಳಗೆ ಎಂಬ ರೀತಿಯಲ್ಲಿ ಈ ವಿವಾದ ಮುಂದು ವರಿಯು ತ್ತಿರುವುದು ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ.

(j.k)

No comments:

Post a Comment