Nov 16, 2010

ಮುಸ್ಲಿಂ ಹುಡುಗಿ ಬುರ್ಖಾ ಧರಿಸದಿದ್ದರೆ ಹಿಂದೂ !!!

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಕಂಡು ಬಂದ ಮುಸ್ಲಿಂ ಜೋಡಿಯನ್ನು ವಿಭಿನ್ನ ಕೋಮಿನವರೆಂದು ಭಾವಿಸಿದ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಅವರನ್ನು ಅಡ್ಡ ಹಾಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಿನ್ನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ನಿನ್ನೆ ಮಧ್ಯಾಹ್ನದ ವೇಳೆ ಮಂಗಳೂರಿನ ಬಸ್ಸೊಂದರಲ್ಲಿ ಬಂದ ಜೋಡಿಯೊಂದು ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಇಳಿದಿದ್ದರು. ಯುವತಿ ಬುರ್ಖಾ ಅಥವಾ ಶಾಲನ್ನು ಧರಿಸದಿದ್ದ ಕಾರಣ ಜೋಡಿಯನ್ನು ಕಂಡ ಹಿಂದೂ ಸಂಘಟನೆಯ ಕಾರ್ಯಕರ್ತರು ಯುವತಿಯನ್ನು ಹಿಂದೂ ಹಾಗೂ ಯುವಕನನ್ನು ಮುಸ್ಲಿಂ ಎಂದು ಭಾವಿಸಿ ಅವರನ್ನು ಅಡ್ಡಗಟ್ಟಿದರು.

ಈ ಸಂದರ್ಭದಲ್ಲಿ ಯುವಕ ತಾವಿಬ್ಬರೂ ಮುಸ್ಲಿಮರು ಎಂದು ಹೇಳಿದರೂ ಆತನ ಮಾತನ್ನು ನಂಬದ ಸಂಘಟನೆಯ ಕಾರ್ಯಕರ್ತರು ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ವಿಚಾರಣೆ ನಡೆಸಿದಾಗ ತಾವಿಬ್ಬರು ಹಿಂದಿನಿಂದಲೂ ಪ್ರೇಮಿಗಳಾಗಿದ್ದು ಇತ್ತೀಚೆಗೆ ನಿಶ್ಚಿತಾರ್ಥವೂ ನಡೆದು ಕೆಲವೇ ದಿನಗಳಲ್ಲಿ ಮದುವೆಯೂ ನಡೆಯಲಿದೆ ಎಂದು ತಿಳಿಸಿದ್ದಾರೆನ್ನಲಾಗಿದೆ. ಆದರೆ ಅಲ್ಲಿಯೂ ಅವರ ಮಾತನ್ನು ನಂಬದ ಪೊಲೀಸರು ಮನೆಯವರಿಗೆ ಸುದ್ದಿ ಮುಟ್ಟಿಸಿದಾಗ ವಿಷಯ ನಿಜವೆಂದು ಗೊತ್ತಾಗಿದೆ. ಯುವಕ ಮಂಗಳೂರಿನವನಾಗಿದ್ದರೆ, ಯುವತಿ ಕಾಸರಗೋಡಿನವಳಾಗಿದ್ದಾಳೆ ಎಂಬುವುದು ವಿಚಾರಣೆ ವೇಳೆ ಗೊತ್ತಾಗಿದೆ. ಯುವತಿ ಮುಸ್ಲಿಮಳಾಗಿದ್ದರೂ ಬುರ್ಖಾ ಅಥವಾ ಸ್ಕಾರ್ಫ್ ಧರಿಸದಿರುವುದರಿಂದ ಸಾರ್ವಜನಿಕ ಸ್ಥಳದಲ್ಲಿ ಇಷ್ಟೆಲ್ಲಾ ರಾದ್ದಾಂತ ನಡೆದಿದೆ.

No comments:

Post a Comment