Nov 12, 2010

ಒಬಾಮ ವಿಸಿಟ್; ಟೇಕಿಟ್ ಆಸ್ ಪೊಸಿಟಿವ್

ಧನಾತ್ಮಕ ಅಂಶಗಳನ್ನು ಹುಡುಕತೊಡಗಿದರೆ ಧನಾತ್ಮಕ ಅಂಶಗಳೇ ಕಾಣಲು ಸಾಧ್ಯ. ಋಣಾತ್ಮಕ ಅಂಶಗಳು ಎದುರಿಗಿದ್ದರೂ ಅವುಗಳು ಕಾಣದಿರಲು ಸಾಧ್ಯ. ಎಲ್ಲವೂ ನಮ್ಮ ಯೋಚನೆಗಳನ್ನು ಅವಲಂಬಿಸಿರುತ್ತದೆ.



ಗೆಳೆಯರೇ, ನಮಗೆ ಕೆಲಸ ಕೊಟ್ಟ ಧನಿಯಲ್ಲಾಗಲೀ ನಮ್ಮ ಕೈ ಕೆಳಗೆ ಕೆಲಸ ಮಾಡುವ ಕೆಲಸಗಾರರಲ್ಲಾಗಲೀ, ನಮ್ಮ ಸಹೋದ್ಯೋಗಿಗಳಲ್ಲಾಗಲೀ... ಇವರ‍್ಯಾರೂ ಬೇಡ, ನಮ್ಮನ್ನು ಕಟ್ಟಿಕೊಂಡವರಲ್ಲಿ, ನಮ್ಮ ಹೆತ್ತವರಲ್ಲಾದರೂ ಕೂಡಾ ತಪ್ಪುಗಳನ್ನೇ ಹುಡುಕಾಡುತ್ತಿದ್ದರೆ ನಮಗೆ ಅವರಲ್ಲಿ ಹೇರಳ ತಪ್ಪುಗಳನ್ನೇ ಕಾಣಲು ಸಾಧ್ಯ. ಹಾಗೆಯೇ ಧನಾತ್ಮಕ ಅಂಶ ಗಳನ್ನು ಹುಡುಕತೊಡಗಿದರೆ ಧನಾತ್ಮಕ ಅಂಶಗಳೇ ಕಾಣಲು ಸಾಧ್ಯ. ಋಣಾತ್ಮಕ ಅಂಶಗಳು ಎದುರಿಗಿದ್ದರೂ ಅವುಗಳು ಕಾಣದಿರಲು ಸಾಧ್ಯ. ಎಲ್ಲವೂ ನಮ್ಮ ಯೋಚನೆಗಳನ್ನ ವಲಂಬಿ ಸಿರುತ್ತದೆ.

ಅಮೆರಿಕಾದ ಅಧ್ಯಕ್ಷ ಬರಾಕ್ ಹುಸೈನ್ ಒಬಾಮಾರವರು ನಾಲ್ಕು ದಿವಸಗಳ ಕಾಲ ಭಾರತದಲ್ಲಿ ತಂಗಿ ಹೋಗಿದ್ದಾರೆ. ಸ್ವಾಗತ ಮತ್ತು ಪ್ರತಿಭಟನೆ, ಈ ಹಿಂದೆ ಇತರ ಅಧ್ಯಕ್ಷರುಗಳಿಗೆ ಭಾರತ ಭೇಟಿಯಲ್ಲಿ ಸಿಕ್ಕಷ್ಟು ಒಬಾಮರಿಗೂ ಸಿಕ್ಕಿದೆ. ಅಮೆರಿ ಕಾವನ್ನು ದೂರುವುದನ್ನೇ ಅಭ್ಯಾಸ ಮಾಡಿಕೊಂಡವರು ಒಬಾಮರನ್ನು ದೂರಿದ್ದೇ ದೂರಿದ್ದು,.. ದೂರಿದ್ದೇ ದೂರಿದ್ದು. ಆದರೆ ದೂರಿದವರಲ್ಲಿ ಒಬಾಮರಲ್ಲಿ ಹೊಗಳುವ ಅಂಶ ಬಹಳಷ್ಟಿದೆ ಎಂದು ಕೊಂಡುಕೊಂಡವರು ಬಹಳ ಕಡಿಮೆ.

ಹಿರೋಶಿಮಾ-ನಾಗಸಾಕಿಗಳ ಮೇಲೆ ಪರಮಾಣು ಬಾಂಬ್ ಹಾಕಿದಾಗಿನಿಂದ ಹಿಡಿದು ಇಂದಿನವರೆಗೂ ಶ್ರೀಮಂತ ಅಮೆರಿಕಾ ಜಗತ್ತಿನ ನೂರಾರು ದೇಶಗಳನ್ನು ನಿರಂತರ ಶೋಷಿಸುತ್ತಲೇ ಇದೆ. ಪೀಡಿಸುತ್ತಲೇ ಇದೆ. ಆದರೆ ಅದಕ್ಕೆಲ್ಲ ಬರಾಕ್ ಹುಸೈನ್ ಒಬಾಮ ಎಂಬ ಆಫ್ರಿಕನ್ ಸಂಜಾತ ಕರಿಯ ವ್ಯಕ್ತಿಯೋರ್ವ ಕಾರಣನಲ್ಲ. ಒಂದು ವೇಳೆ ಒಬಾಮ ಯಾವುದಾದರೂ ದೇಶದ ಮೇಲೆ ಹೊಸದಾಗಿ ದಾಳಿ ನಡೆಸುವ ಆಲೋಚನೆಯಲ್ಲಿದ್ದಿದ್ದರೆ ಆಗ ಧಾರಾಳವಾಗಿ ದೂರಿಕೊಳ್ಳಬಹುದು. ಆದರೆ ಒಬಾಮ ಅಂಥಾ ಆಲೋಚನೆಯಲ್ಲೇ ಇಲ್ಲ. ಇರಾಕ್ ಅಫ್ಘಾನಿಸ್ಥಾನ ದಲ್ಲಿರುವ ಅಮೇರಿಕನ್ ಸೈನಿಕರ ಸಂಖ್ಯೆಯಲ್ಲಿ ಆದಷ್ಟು ಕಡಿಮೆಗೊಳಿಸುವುದೇ ತನ್ನ ಮೊದಲು ಗುರಿ ಎಂದಿದ್ದರು ಒಬಾಮ. ಆದರೆ ಅದೆಲ್ಲಾ ಹೇಳಿದಷ್ಟು ಸುಲಭದ ಕೆಲಸವಲ್ಲ ಎನ್ನುವುದು ಇಡೀ ಜಗತ್ತಿಗೆ ಗೊತ್ತಿರುವ ವಿಷಯ. ಆ ಕಾರಣಕ್ಕಾಗಿಯೇ ಒಬಾಮ ತನ್ನೆಲ್ಲ ಇತಿಮಿತಿಗಳ ನಡುವೆ ಇರಾಕ್ ಅಫ್ಘಾನಿಸ್ಥಾನ ವಿಷಯಗಳನ್ನು ನಾಜೂಕಾಗಿ ಸಂಭಾಳಿಸುತ್ತಿದ್ದಾರೆ. ತಾನೆನಿಸಿದಂತೆ ಎಲ್ಲವನ್ನು ಬದಲಾಯಿಸಿ ಬಿಡಲು ಆತನೇನು ದೇವನಲ್ಲ. ‘ಅಮೆರಿಕಾ ಎಂಬ ಶ್ರೀಮಂತ ದೇಶವೊಂದರ ಅಧ್ಯಕ್ಷ ಪದವಿ’ ಎಂಬ ಪದವಿಯನ್ನು ಒಬಾಮ ಎಂಬ ಆಫ್ರಿಕನ್ ಸಂಜಾತ ಕರಿಯ ವ್ಯಕ್ತಿಯೋರ್ವನ ಮೇಲೆ ಹೇರದೆ ಒಬಾಮರರ ‘ವ್ಯಕ್ತಿತ್ವ’ವನ್ನು ಮಾತ್ರ ಅಭ್ಯಸಿಸಿದರೆ ಒಬಾಮ ಅದೆಂಥಾ ಮಹಾನ್ ನಾಯಕನೆಂದು ಅರ್ಥಮಾಡಿಕೊಳ್ಳಬಹುದು. ಅಮೆರಿಕಾ ಎಂಬ ಶ್ರೀಮಂತ ದೇಶದಲ್ಲಿ ಎಂತೆಂಥಾ ಬಿಳಿಯ ಮೇಧಾವಿಗಳಿದ್ದಾರೆ, ತಜ್ಞರಿದ್ದಾರೆ, ಗಣ್ಯರಿದ್ದಾರೆ, ಬಿಲಿಯನರ್‌ಗಳಿದ್ದಾರೆ.

ಆದರೆ ಇವರೆಲ್ಲ ಕನಸಿನಲ್ಲಿಯೂ ಎಣಿಸಲಾಗದಂಥ ‘ಅಧ್ಯಕ್ಷ ಪದವಿ’ ಬರಾಕ್ ಹುಸೈನ್ ಒಬಾಮ ಎಂಬ ಆಫ್ರಿಕನ್ ಸಂಜಾತ ಕರಿಯ ವ್ಯಕ್ತಿಗೆ ಒಲಿದಿರಬೇಕಾದರೆ ಅದೇನು ಸಣ್ಣ ಮಾತೇ?! ಯಕಶ್ಚಿತ್ ಒಂದು ಮಂತ್ರಿ ಪದವಿಗಾಗಿ ಎಷ್ಟು ಕಷ್ಟ ಪಡುತ್ತಿದ್ದಾರೆ ನಮ್ಮ ನಾಯಕರೆನಿಸಿ ಕೊಂಡವರು. ಮುಖ್ಯಮಂತ್ರಿ ಪದವಿಗೆ ಎಷ್ಟೊಂದು ಕಷ್ಟಪಡುತ್ತಿದ್ದಾರೆ ನಮ್ಮ ಮಹಾನ್ ನಾಯಕರೆನಿಸಿ ಕೊಂಡವರು!

ಗೆಳೆಯರೇ, ನೀವು ನೋಡಿ ಇವತ್ತು ಜಗತ್ತಿನ ಅಗ್ರಗಣ್ಯ ನಾಯಕರು, ಮೇಧಾವಿಗಳು, ತಜ್ಞರು, ಬಿಲಿಯನೆರ್‌ಗಳು ಎಲ್ಲರೂ ಒಬಾಮರ ಎದುರು ಬಾಗಿ ನಿಲ್ಲುತ್ತಾರೆ. ಅವರ ಚಾಕರಿಗೆ ಅಮೇರಿಕಾದ ಬಿಳಿಯರು ಸರ್ವಸನ್ನದ್ಧ ರಾಗಿ ನಿಂತಿದ್ದಾರೆ. ಭಾರತದ ಅವರ ನಾಲ್ಕು ದಿವಸಗಳ ಭೇಟಿಗೆ ಮೂರು ಸಾವಿರದ ಆರು ನೂರು ಕೋಟಿ ರೂಪಾಯಿಗಳನ್ನು ಏನೂ ಅಲ್ಲವೆಂಬಂತೆ ಖರ್ಚು ಮಾಡಲಾಗಿದೆ. ಅವರು ಎಲ್ಲಿ ಕಾಲಿಡುತ್ತಾರೊ ಅಲ್ಲಿ ವಾತಾವರಣ ಒಮ್ಮೆಲೆ ವಿದ್ಯುತ್ ಹರಿದಂತೆ, ಶಾಕ್ ಹೊಡೆದಂತೆ ಸ್ತಬ್ಧವಾಗಿ ಬಿಡುತ್ತದೆ. ಒಬಾಮ ಇಂಥಾ ಪರಾ ಕ್ರಮಿಯಾದದ್ದು ಹೇಗೆ? ಹೇಗೆ?, ಹೇಗೆ?!

ಆತ್ಮವಿಶ್ವಾಸ ಗೆಳೆಯರೇ ಆತ್ಮವಿಶ್ವಾಸ. ಆತ್ಮ ವಿಶ್ವಾಸವೇ ಒಬಾಮರನ್ನು ಇಂಥಾ ಪರಾಕ್ರಮಿಯ ನ್ನಾಗಿಸಿದ್ದು, ಒಬಾಮರ ಆತ್ಮ ವಿಶ್ವಾಸ ಮತ್ತು ಅದನ್ನು ಪ್ರಕಟಿಸಿದ ರೀತಿ ಎಷ್ಟು ಚೇತೋಹಾರಿಯಾಗಿತ್ತೆಂದರೆ ಬಿಳಿಯರಿಗೆ ತಾವು ಬಿಳಿಯರೆಂಬ ದುರಭಿಮಾನ ಮರೆತು ಹೋಯಿತು. ಕರಿಯರಿಗೆ ತಾವು ಕರಿಯ ರೆಂಬ ಕೀಳರಿಮೆ ಮರೆತು ಹೋಯಿತು. ಒಬಾಮರ ಹಲವು ಭಾಷಣಗಳನ್ನು ಅಮೆರಿಕದ ಇತಿಹಾದಲ್ಲಿ ಅದ್ಭುತ ಭಾಷಣಗಳನ್ನು ಮಾಡಿದ ರೂಸ್‌ವೆಲ್ಡ್, ಜಾರ್ಜ್ ವಾಷಿಂಗ್ಟನ್, ಕೆನಡಿ ಮೊದಲಾದವರ ಭಾಷಣಗಳ ಸಾಲಿನಲ್ಲಿ ನಿಲ್ಲಿಸಿ ನೋಡಲಾಗುತ್ತಿದೆ. ‘ವಿ ಕ್ಯಾನ್ ಡೂ ಇಟ್’ ಎಂದು ತನ್ನ ಅದ್ಭುತ ಕಂಚಿನ ಕಂಠದಿಂದ ಘೋಷಣೆ ಕೂಗಿ ಒಬಾಬ ಮರವರು ಅಮೇರಿಕನ್ನರ ರೋಮ ರೋಮಗಳಲ್ಲಿ ಸಂಚಲನವನ್ನು ಉಂಟು ಮಾಡಿದ್ದರು. ಒಳ ಭೇದ ಗಳಿಂದ ಸಾಮಾಜಿಕ ನಿರ್ವೀಯತೆಯಿಂದ ಬಳಲುತ್ತಿದ್ದ ಅಮೆರಿಕಕ್ಕೆ ಹೊಸ ಚೈತನ್ಯ ತಂದು ಬಿಟ್ಟರು ಒಬಾಮ.

ಇಲ್ಲಿ ಗಮನಿಸಬೇಕಾದ ಅತಿಮುಖ್ಯ ಅಂಶವೇನೆಂದರೆ ಒಬಾ ಮರವರು ‘ವಿ. ಕ್ಯಾನ್ ಡೂ ಇಟ್’ ಎನ್ನುವ ಮೊದಲು ತನಗೆ ತಾನೇ ‘ಐ ಕ್ಯಾನ್ ಡೂ ಇಟ್’ ಎನ್ನುತ್ತಿದ್ದರು ಎನ್ನುವುದು. ಐ ಕ್ಯಾನ್ ಡೂ ಇಟ್ ಎನ್ನುವುದನ್ನು ಸಾಕ್ಷಾತ್ಕರಿಸಿದ ನಂತರವೇ ಅವರು ವಿ ಕ್ಯಾನ್ ಡೂ ಇಟ್ ಎಂದು ಹೇಳುವುದಕ್ಕೆ ಧೈರ್ಯ ಮಾಡಿದ್ದು. ಅವರಿಗೆ ಅವರ ಒಂದು ಆತ್ಮವನ್ನು ಅವರ ಒಂದು ಶರೀರವನ್ನು ಮುಂದಕ್ಕೆ ಕೊಂಡೊಯ್ಯುವ ಧೈರ್ಯ ಇಲ್ಲದಿರುತ್ತಿದ್ದರೆ ಇಡೀ ಅಮೇರಿಕಾವನ್ನು ಒಗ್ಗೂಡಿಸಿ ಮುಂದಕ್ಕೊಯ್ಯುವ ಧೈರ್ಯ ಖಂಡಿತಾ ಬರುತ್ತಿರಲಿಲ್ಲ.

ಈ ಹಿನ್ನೆಲೆಯಲ್ಲಿ ನಾನು ಹೇಳುವುದು ಇಷ್ಟೆ. ನಾವು ಈ ದೇಶದಲ್ಲಿ ೧೧೦ಕೋಟಿಯಷ್ಟಿದ್ದೇವೆ. ನಾವು ಪ್ರತಿಯೊಬ್ಬರೂ ವೈಯು ಕ್ತಿಕವಾಗಿ ಆತ್ಮವಿಶ್ವಾಸಿಗಳಾಗಬೇಕು. ಏನಾದರೂ ಆಗಬೇಕು ಎಂಬ ಪ್ರಜ್ಞೆ ಬೆಳೆಸಿಕೊಳ್ಳಬೇಕು. ನಾವು ಸಂಖ್ಯೆಯಲ್ಲಿ ಮಾತ್ರ ೧೧೦ಕೋಟಿ ಯಾಗಿರಬಾರದು. ನಾವು ಪ್ರತಿಯೊಬ್ಬರೂ ಒಂದೊಂದು ಶಕ್ತಿಯಾ ಗಬೇಕು. ೧೧೦ ಕೋಟಿ ಶಕ್ತಿಯಾಗಬೇಕು. ವಿ ಕ್ಯಾನ್ ಡೂ ಇಟ್, ವಿ ಕ್ಯಾನ್ ಡೂ ಎನಿಥಿಂಗ್!!!(j.k)

No comments:

Post a Comment