
ತಾಯಿ ಕನ್ನಡ ಮಾತೆ ಹೈರಾಣಾಗಿ ಹೋಗಿದ್ದಳು. ಆಕೆ ತಲೆ ತಲಾಂತರಗಳಿಂದ ವಾಸ ಮಾಡುತ್ತಾ ಬಂದಿದ್ದ ಐದು ಸೆಂಟ್ಸ್ ಜಾಗದಲ್ಲಿ ಅದಿರು ಇದೆ ಎಂಬ ಕಾರಣಕ್ಕೆ ರೆಡ್ಡಿ ಸಹೋದರರು ಗಣಿಗಾರಿಕೆ ಶುರು ಮಾಡಿದ್ದರು. ಮನೆಯ ಹಿತ್ತಲನ್ನು ಸೆಝ್‌ಗಾಗಿ ವಶಪಡಿಸಿಕೊಂಡಿದ್ದರು. ಅಂಗಳವನ್ನು ಕಟ್ಟಾ ಮತ್ತು ಅವರ ಕುಟುಂಬ ವಶಪಡಿಸಿಕೊಂಡಿತ್ತು. ಕುಮ್ಕಿ ಜಾಗವನ್ನು ಯಡಿಯೂರಪ್ಪ ಮತ್ತು ಮಕ್ಕಳು ವಶಪಡಿಸಿಕೊಂಡಿದ್ದರು. ಒಟ್ಟಿನಲ್ಲಿ ಕನ್ನಡ ಮಾತೆ ಮಾತೇ ಇಲ್ಲದೆ ಮೂಕಳಾಗಿದ್ದಳು. ಆಕೆ ಬೀದಿ ಪಾಲಾಗಿದ್ದಳು. ಹಸಿವಿನಿಂದ ಚೀರಾಡುವ, ಸಿಂಬಳ ಸುರಿಸುವ ಮಕ್ಕಳ ಜೊತೆಗೆ ಬಸ್‌ಸ್ಟೇಂಡ್‌ನಲ್ಲಿ ಕಾಲ ಕಳೆಯ ತೊಡಗಿದಳು.
ಅಕ್ಕ ಪಕ್ಕದ ತೆಲುಗು, ಮಲಯಾಳ, ತಮಿಳು ಮಾತೆಯರು ಆಕೆಯ ಮುಂದೆ ರೇಷ್ಮೆ ಸೀರೆಯುಟ್ಟು, ವ್ಯಾನಿಟಿ ಬ್ಯಾಗನ್ನು ಹೆಗಲಿಗೇರಿಸಿ ಓಡಾಡುತ್ತಿದ್ದರು. ಆಗಾಗ ಐದು ಪೈಸೆ, ಹತ್ತು ಪೈಸೆ ಭಿಕ್ಷೆ ಹಾಕುತ್ತಿದ್ದರು. ಹಲವರು ಆಕೆಯ ಸೀರೆಯನ್ನು ಎಳೆದೂ ಎಳೆದೂ ಅದು ಚಿಂದಿ ಚಿಂದಿಯಾಗಿ ಹೋಗಿತ್ತು. ಆಕೆಯ ಎಲುಬು ಗೂಡಿನೊಳಗೆ ಇನ್ನೂ ಏದುಸಿರು ಬಿಡುತ್ತಿದ್ದ ಮಾನ ಅನ್ನೋದಕ್ಕೆ ಇನ್ನೊಂದು ಹೊಸ ಸೀರೆ ಇದ್ದರೆ ಚೆನ್ನ ಅನ್ನಿಸಿತು. ಕನ್ನಡ ಮಾತೆಯ ಬಳಿ ಆಕೆಯ ಮಾನ ಅಳುತ್ತಾ ಹೇಳಿತು ‘‘ನಾನಿನ್ನೂ ಅಲ್ಪಸ್ವಲ್ಪ ಉಸಿರು ಬಿಡುತ್ತಿದ್ದೇನೆ. ಇನ್ನೂ ನಾನು ಬದುಕಬೇಕಾದರೆ ನೀನು ಮೈತುಂಬಾ ಸೀರೆ ಉಟ್ಟುಕೊಳ್ಳಲೇ ಬೇಕು’’
ಕನ್ನಡ ಮಾತೆ ಕಂಗಾಲಾದಳು. ತನ್ನ ಮಕ್ಕಳಿಗೆ ಲಂಗೋಟಿ, ಹಾಲು ಕೊಡುವುದರಲ್ಲೇ ಆಕೆ ಸುಸ್ತಾಗಿದ್ದಳು. ಇನ್ನು ಹೊಸ ಸೀರೆಗೆ ಎಲ್ಲಿ ಹೋಗಬೇಕು? ಅಷ್ಟರಲ್ಲಿ ಯಾರೋ ಹೇಳಿದರು ‘‘ಮುಖ್ಯಮಂತ್ರಿ ಎಡಿಯೂರಪ್ಪನೋರು ಭಾಗ್ಯಲಕ್ಷ್ಮಿಯರಿಗೆ ಸೀರೆ ಹಂಚುತ್ತಿದ್ದಾರೆ....’’ ಕನ್ನಡಮ್ಮನಿಗೆ ಅದನ್ನು ಕೇಳಿ ಸಂತೋಷವಾಯಿತು. ಕನ್ನಡಮ್ಮ ತನ್ನ ಮಕ್ಕಳ ಜೊತೆಗೆ ಸೀರೆ ಹಂಚುವ ಸ್ಥಳಕ್ಕೆ ಹೋದಳು. ನೋಡಿದರೆ ಅಲ್ಲಿ ಜನರೋ ಜನರು. ಕನ್ನಡಮ್ಮ ತನ್ನ ಹರಿದ ಸೀರೆಯಲ್ಲೇ ಮಾನವನ್ನು ಕಷ್ಟಪಟ್ಟು ಮುಚ್ಚುತ್ತಾ...ಅತ್ತ ಧಾವಿಸಲು ಪ್ರಯತ್ನಿಸ ತೊಡಗಿದಳು.
ಆದರೆ ಸೀರೆ ಹಂಚುವ ಸ್ಥಳದ ಸುತ್ತ ಬೇಲಿ ಹಾಕಲಾಗಿತ್ತು. ಪೊಲೀಸರು ಲಾಠಿ ಹಿಡಿದು ಕಾವಲು ಕಾಯುತ್ತಿದ್ದರು. ಕನ್ನಡಮ್ಮ ಒಂದು ಬಾಗಿಲಿನಲ್ಲಿ ಪ್ರವೇಶಿಸಲು ಯತ್ನಿಸಿದಂತೆ ಪೊಲೀಸರು ಆಕೆಯನ್ನು ಹೊರಗೆ ನೂಕಿದರು. ‘‘ಅಪ್ಪಾ ಕಂದ, ನನ್ನ ಆನಂದ...ಯಾಕಪ್ಪಾ ನನ್ನನ್ನು ತಳ್ಳುತ್ತೀರಿ? ನನ್ನ ಸೀರೆ ಹರಿದಿದೆ. ಮುಖ್ಯಮಂತ್ರಿಯೋರು ಸೀರೆ ಕೊಡ್ತಾರೆ ಅಂತ ಗೊತ್ತಾಯಿತು. ಅದಕ್ಕೆ ಬಂದಿದ್ದೀನಿ...’’ ಎಂದು ಕನ್ನಡಮ್ಮ ಅಚ್ಚ ಕನ್ನಡದಲ್ಲಿ ಹೇಳಿದಳು.
ಪೊಲೀಸಪ್ಪ ಕಣ್ಣು ಕೆಕ್ಕರಿಸಿ ಕೇಳಿದ ‘‘ಯಾರು ನೀನು? ನಿನ್ನ ಹೆಸರೇನು?’’
‘‘ನನ್ನ ಹೆಸರು ಕನ್ನಡಮ್ಮ ಅಂತ. ಆರೆಸ್ಸೆಸ್ನೋರು ನನ್ನನ್ನು ತಾಯಿ ಭುವನೇಶ್ವರಿ ಎಂದು ಕರೀತಾರೆ. ಹಿರಿಯರು ಸೇರಿ ಕರ್ನಾಟಕ ಅಂತ ಕರೆದ್ರು. ವಾಟಾಳಪ್ನೋರು ನನ್ನನ್ನು ಖನ್ನಡ ಮಾಥೆ ಎಂದು ಕರೀತಾರೆ. ಉತ್ತರ ಭಾರತದೋರು ನನ್ನನ್ನು ಮದ್ರಾಸಿ ಅಂತ ಕರೀತಾರೆ. ವೆಂಕಯ್ಯ ನಾಯ್ಡು ಕನ್ನಡಮ್ಮಗಾರು ಅಂತ ಕರೀತಾರೆ. ಮಾರಾಠಿಯೋರು ನನ್ನನ್ನು ಕಾನಡೀ ಅಮ್ಮಾ ಅಂತಾರೆ....’’
ಪೊಲೀಸಪ್ಪ ನಕ್ಕ ‘‘ಅಲ್ಲಮ್ಮ...ಕನ್ನಡಮ್ಮ ಅಂತಾ ಹೆಸರಿಟ್ಟುಕೊಂಡಿದ್ದೀಯ. ಆದರೆ ಸರಿಯಾಗಿ ನಾಲ್ಕು ಇಂಗ್ಲೀಷ್ ಮಾತಾಡೋಕೆ ಬರೋಲ್ಲ... ಹೋಗ್ಲಿ...ಓ ಅಲ್ಲಿ ಬಿಜೆಪಿ ಮುಖಂಡರಿದ್ದಾರೆ...ಅವರತ್ರ ಹೋಗಿ ನಿನ್ನ ಗೋಳು ತೋಡ್ಕೋ....’’
ಕನ್ನಡಮ್ಮ ಬಿಜೆಪಿ ಮುಖಂಡನ ಬಳಿಗೆ ಹೋದಳು. ಆಗ ತಾನೆ ಬೆಂಗಳೂರಿನ ಸುಮಾರು 5 ಬಿಡಿಎ ಸೈಟುಗಳನ್ನು ತಿಂದು ನೀರು ಕುಡಿದಿದ್ದರಿಂದ ಆತ ‘ಡರ್ರ್’ ಅಂತ ತೇಗು ಬಿಡುತ್ತಿದ್ದ. ಹೆಗಲಿಗೆ ಕೇಸರಿ ಶಾಲು ಹಾಕಿ ಕೊಂಡಿದ್ದ. ಕನ್ನಡಮ್ಮ ಬಿಜೆಪಿ ಮುಖಂಡನಿಗೆ ಕೈ ಮುಗಿದು ಹೇಳಿದಳು ‘‘ನನಗೊಂದು ಭಾಗ್ಯಲಕ್ಷ್ಮಿ ಸೀರೆ ಕೊಡುಸ್ರಪ್ಪ... ನನ್ನ ಮಾನ ಕಾಪಾಡ್ರಪ್ಪ ನನ್ ಮಕ್ಳಾ...’’
ಬಿಜೆಪಿ ಮುಖಂಡ ಆಕೆಯ ಮಾನವನ್ನೊಮ್ಮೆ ಕಾಲಿನಿಂದ ತಲೆಯವರೆಗೆ ಅಳೆದ. ಎಲುಬು ಗೂಡು ಮುದುಕಿ. ಇವಳಿಗೆ ಮಾನ ಬೇರೆ...ಎಂದು ಮನದಲ್ಲೇ ತಿರಸ್ಕಾರದ ನಗೆ ನಕ್ಕು ‘‘ಎಷ್ಟು ಮಕ್ಕಳಮ್ಮ ನಿನಗೆ?’’ ಎಂದು ಕೇಳಿದ.
‘‘ಇವೆಲ್ಲ ನನ್ ಮಕ್ಳು ಬುದ್ದಿ’’ ಎಂದು ತನ್ನ ಹಿಂದೆ ಬಾಲದಂತೆ ನಿಂತಿದ್ದ ಎಲುಬು ಗೂಡಿನ ಮಕ್ಕಳ ಸಾಲನ್ನು ತೋರಿಸಿದಳು ಕನ್ನಡಮ್ಮ.
‘ಇಂದಿನ ಮಕ್ಕಳೇ ಮುಂದಿನ ಓಟುಗಳು’ ಎಂದು ತನಗೆ ತಾನೆ ಗೊಣಗಿದ ಬಿಜೆಪಿ ಮುಖಂಡ ‘‘ಅಂಗೆಲ್ಲ ಸೀರೆಗಳನ್ನು ಕೊಡೋಕಾಗಲ್ಲ...ಹಕ್ಕು ಪತ್ರ ಇದೆಯಾ...?’’
ಕನ್ನಡಮ್ಮನಿಗೆ ಆ ಭಾಷೆ ಅರ್ಥವಾಗಲಿಲ್ಲ. ‘‘ಸಂವಿಧಾನವೆಂಬ ಹಕ್ಕು ಪತ್ರವಿದೆ. ಅದು ಸಾಕೇನಪ್ಪ?’’ ಕನ್ನಡಮ್ಮ ಕೇಳಿದಳು.
‘‘ಅದಲ್ಲಮ್ಮ...ನೀನು ವಾಸ ಮಾಡೋ ಜಾಗ ಎಲ್ಲಿ...ಅದರ ಹಕ್ಕುಪತ್ರ ಇದೆಯಾ?’’ ಕೇಳಿದ. ‘‘ನನ್ನ ಮನೆಯನ್ನು ಕಿತ್ಕೊಂಡ್ರು ಕಣಪ್ಪ...’’ ಕನ್ನಡಮ್ಮ ಉತ್ತರಿಸಿದಳು.
‘‘ಕಿತ್ಕೊಂಡ್ರಾ...? ಯಾರು, ದೇವೇಗೌಡ್ರ... ಕಾಂಗ್ರೆಸ್ನೋರಾ...? ಬಿಜೆಪಿ ಕಾರ್ಯಕರ್ತೆಯ ಭೂಮಿಯನ್ನು ಕಿತ್ಕೊಂಡಿದ್ದಾರೆ... ಧಿಕ್ಕಾರ... ಧಿಕ್ಕಾರ...’’ ಬಿಜೆಪಿ ಮುಖಂಡ ಚೀರಾಡ ತೊಡಗಿದ. ಅವನ ಹಿಂಬಾಲಕರು ಅದಕ್ಕೆ ಧ್ವನಿಗೂಡಿಸಿದರು.
ಕನ್ನಡಮ್ಮ ಕಂಗಾಲಾದಳು. ಆಕೆಯದು ಸತ್ಯವೇ ನಮ್ಮ ತಾಯಿ ತಂದೆಯ ವಂಶ. ಸುಳ್ಳು ಹೇಗೆ ಹೇಳಿಯಾಳು...? ‘‘ಯಡಿಯೂರಪ್ನೋರು, ಅವರ ಗೆಳೆಯರು ಸೇರಿ ನನ್ನ ಭೂಮಿ ಕಿತ್ಕೊಂಡ್ರು ಕಂದಾ...’’ ಕನ್ನಡಮ್ಮ ಜೋರಾಗಿ ಕೂಗಿದಳು.
ಬಿಜೆಪಿ ಮುಖಂಡ ಒಮ್ಮೆಲೆ ಥಕ್ಕೆಂದು ಸಿಡಿಲು ಬಡಿದವನಂತೆ ನಿಂತು ಬಿಟ್ಟ ‘‘ಏನಮ್ಮ...ನಿನ್ನನ್ನು ಇಲ್ಲಿಗೆ ಜೆಡಿಎಸ್‌ನೋರು ಕಳಿಸಿದ್ದಾರೇನು? ಯಡಿಯೂರಪ್ಪರ ಭಾಗ್ಯಲಕ್ಷ್ಮಿ ಪ್ರೋಗ್ರಾಂ ಹಾಳು ಮಾಡಬೇಕು ಅಂತ?’’ ಕನ್ನಡಮ್ಮನನ್ನು ಕಣ್ಣು ಕೆಕ್ಕರಿಸಿ, ಕೇಳಿದ.
ಕನ್ನಡಮ್ಮ ಹೆದರಿದಳು...‘‘ಹಂಗೆಲ್ಲ ಹೇಳ್ಬೇಡ ಕಂದಾ...ಒಂದು ಸೀರೆ ಕೊಟ್ಟು ನನ್ನ ಮಾನ ಕಾಪಾಡು...’’ ಗೋಗರೆದಳು.
ಈಗ ಬಿಜೆಪಿ ಮುಖಂಡ ಸ್ವಲ್ಪ ತಣ್ಣಗಾದ. ‘‘ಅಭಿವದ್ಧಿ ಕಣಮ್ಮ...ನಾಡು ಅಭಿವದ್ಧಿ ಮಾಡೋದಕ್ಕೆ ನಿನ್ನ ಭೂಮಿ ಕಿತ್ಕೊಂಡಿದ್ದಾರೆ. ಅದನ್ನ ಹಿಂಗೆ ಓಪನ್ನಾಗಿ ಹೇಳ್ಕೊಂಡು ತಿರುಗಾಡಬೇಡ. ಹೋಗ್ಲಿ...ನಿನ್ನಲ್ಲಿ ಓಟು ಮಾಡೋದಕ್ಕೆ ಐಡಿ ಕಾರ್ಡ್ ಇದೆಯಾ?’’
‘‘ಇತ್ತು ಕಣಪ್ಪ...ಆದ್ರೆ ಮಕ್ಕಳು ಹಸಿವು ಹಸಿವೂ ಅಂತ ಬಡ್ಕೋತಿರುವಾಗ ನಾಲ್ಕು ತುಂಡು ಬ್ರೆಡ್ಡು ಕೊಟ್ಟು, ಜನಾರ್ದನ ರೆಡ್ಡಿ ಅನ್ನೋ ಮಹಾರಾಯ ಕಿತ್ಕೊಂಡ ಕಣಪ್ಪ...’’ ಕನ್ನಡಮ್ಮ ಮತ್ತೆ ಅಳ ತೊಡಗಿದಳು.
‘‘ಅರೆ! ಓಟರ್ ಐಡಿ ಇದೆಯಾ ಅಂದ್ರೆ...ಅದಕ್ಕೂ ಕಿತ್ಕೊಂಡ್ರು ಅಂತ ಹೇಳ್ತಾ ಇದ್ದೀಯ? ಓಟರ್ ಐಡಿ ಇಲ್ಲದಿದ್ರೆ ಸೀರೆ ಕೊಡೋಕ್ಕಾಗಲ್ಲ ತಾಯಿ....ಹೋಗ್ ಹೋಗ್...’’ ಮುಖಂಡ ಕನ್ನಡಮ್ಮನನ್ನು ನೂಕಿದ. ಅದರ ರಭಸಕ್ಕೆ ಕನ್ನಡಮ್ಮ ಅಷ್ಟು ದೂರ ಬಿದ್ದಳು. ಕನ್ನಡಮ್ಮನ ಮಕ್ಕಳೆಲ್ಲ ‘‘ಅವ್ವಾ ಅವ್ವಾ....’’ ಎಂದು ಸುತ್ತ ನೆರೆದು ಅಳತೊಡಗಿದವು. ಸಾವರಿಸಿ ಎದ್ದ ಕನ್ನಡಮ್ಮ ಬಿಜೆಪಿ ಮುಖಂಡನ ಕಾಲಿಗೆ ಬಿದ್ದಳು. ‘‘ನನ್ನನ್ನು ಒಳಗೆ ಹೋಗೋಕ್ ಬಿಡಪ್ಪ... ನನಗೊಂದು ಸೀರೆ ಕೊಟ್ಟು ಮಾನ ಕಾಪಾಡಪ್ಪ....’’
ಬಿಜೆಪಿ ಮುಖಂಡನಿಗೆ ತಲೆನೋವಾಯಿತು. ಎಲ್ಲರೆದುರು ಬಿಜೆಪಿಯ ಮಾನ ಕಳೆಯುತ್ತಿದ್ದಾಳೆ ಎಂದು ಸಿಟ್ಟಾಗಿ...ಕೊನೆಗೂ ಕಾರ್ಯಕರ್ತನ ಕೈಯಲ್ಲಿ ಒಂದು ಕಳಪೆ ಸೀರೆಯನ್ನು ತರಿಸಿ ಅದನ್ನು ಕನ್ನಡಮ್ಮನ ಮುಖಕ್ಕೆ ಎಸೆದ. ಕನ್ನಡಮ್ಮ ಆ ಸೀರೆಯನ್ನು ತೆಗೆದುಕೊಂಡವಳೇ, ಮರದ ಮರೆಯಲ್ಲಿ ತನ್ನ ಹಳೇ ಹರಿದು ಚಿಂದಿಯಾದ ಸೀರೆಯನ್ನು ಎಸೆದು, ಹೊಸ ಸೀರೆ ಉಟ್ಟಳು.
ಕನ್ನಡಮ್ಮ ಸೀರೆ ಉಡುತ್ತಿದ್ದಂತೆ ಒಂದು ಕಡೆಯಿಂದ ಜೆಡಿಎಸ್ ಕಾರ್ಯಕರ್ತರು, ಇನ್ನೊಂದು ದಿಕ್ಕಿನಿಂದ ಕಾಂಗ್ರೆಸ್ ಕಾರ್ಯಕರ್ತರು ‘‘ಧಿಕ್ಕಾರ ಧಿಕ್ಕಾರ... ಯಡಿಯೂರಪ್ಪ ಸೀರೆಗೆ ಧಿಕ್ಕಾರ... ಯಡಿಯೂರಪ್ಪ ಕೊಟ್ಟ ಸೀರೆಯನ್ನು ಉಟ್ಟವರೆಲ್ಲ ಭ್ರಷ್ಟರು....’’ ಎಂದು ಕೂಗುತ್ತಾ ಬಂದರು. ಕನ್ನಡಮ್ಮ ನೋಡುತ್ತಿದ್ದ ಹಾಗೆಯೇ ಜೆಡಿಎಸ್ ಕಾರ್ಯಕರ್ತರು ಕೂಗಿದರು ‘‘ಅದು, ಅವ್ಯವಹಾರದಿಂದ ನೀಡಿದ ಸೀರೆ. ಕಿತ್ತು ಬಿಸಾಡು ಅದನ್ನು....’’
ಕಾಂಗ್ರೆಸ್ ಕಾರ್ಯಕರ್ತರು ಇನ್ನೊಂದು ಕಡೆಯಿಂದ ಹೇಳಿದರು ‘‘ಇದು ಗುಜರಾತ್ ಸೀರೆ....ಕನ್ನಡ ನೇಕಾರರಿಗೆ ಅನ್ಯಾಯವಾಗಿದೆ. ಗುಜರಾತ್ ಸೀರೆಯನ್ನು ಹಂಚುವುದನ್ನು ತಕ್ಷಣ ನಿಲ್ಲಿಸಬೇಕು....ಗುಜರಾತ್ ಸೀರೆ ಉಟ್ಟವರು ಕನ್ನಡ ದ್ರೋಹಿಗಳು...’’
ಕನ್ನಡಮ್ಮ ಕಂಗಾಲಾದಳು....‘‘ನನ್ನ ಬಳಿ ಬೇರೆ ಸೀರೆ ಇಲ್ಲ ಕಣ್ರಪ್ಪ....’’ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರಿಗೆ ಕೈ ಮುಗಿದಳು.
ಉಭಯ ಗುಂಪು ಗದ್ದಲ ಎಬ್ಬಿಸಿತು ‘‘ಸಾಧ್ಯವೇ ಇಲ್ಲ...ಭ್ರಷ್ಟರ ಸೀರೆಯನ್ನು ಕಿತ್ತೆಸೆಯಲೇ ಬೇಕು....ಗುಜರಾತ್ ಸೀರೆಯನ್ನು ಹರಿದೊಗೆಯಲೇ ಬೇಕು....’’
ಕನ್ನಡಮ್ಮ ತನ್ನ ಸೀರೆಯನ್ನು ಮೈತುಂಬಾ ಹೊದ್ದು ಕೇಳಿದಳು ‘‘ಬಿಟ್ಟು ಬಿಡಿ ನನ್ನ ಕಂದಗಳಿರಾ...ಕನ್ನಡಮ್ಮನ ಮಾನ ಕಾಪಾಡಿ ಕಂದಗಳಿರಾ....ನನ್ನ ಸೀರೆ ಎಳೆಯಬೇಡಿ...ಅಯ್ಯೋ ನನ್ನ ಸೀರೆ ಎಳೆಯಬೇಡಿ....’’
ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಜೊತೆ ಸೇರಿ ಕನ್ನಡಮ್ಮನ ಸೆರಗಿಗೆ ಕೈ ಹಾಕಿದರು. ಭ್ರಷ್ಟವಾಗಿರುವ, ಗುಜರಾತ್ ಸೀರೆಯನ್ನು ಎಳೆದು ಅದಕ್ಕೆ ಬೆಂಕಿ ಹಚ್ಚಿದರು.
ನಡು ಬೀದಿಯಲ್ಲಿ ಬೆತ್ತಲಾಗಿ ನಿಂತ ಕನ್ನಡಮ್ಮ ಅವಮಾನದಿಂದ ಬಿಕ್ಕಿ ಬಿಕ್ಕಿ ಅಳತೊಡಗಿದಳು.
ಆಕೆಯ ಅಸಂಖ್ಯ ಮಕ್ಕಳು ಆ ದಶ್ಯವನ್ನು ನಿಸ್ಸಹಾಯಕರಾಗಿ, ಷಂಡರಂತೆ ನೋಡುತ್ತಿದ್ದರು.
*ಚೇಳಯ್ಯ
No comments:
Post a Comment