
ನವೆಂಬರ್ 26ರಂದು ಸಂಭವಿಸಿದ ಮುಂಬೈ ದಾಳಿಗೆ 2 ವರ್ಷ ಕಳೆದಿದೆ. ಆದರೆ ಅದು ಈ ದೇಶದ ಭದ್ರತೆಯ ಮೇಲೆ ಮಾಡಿದ ಗಾಯ ಇನ್ನೂ ಒಣಗಿಲ್ಲ. ಸಂತ್ರಸ್ತರ ಕಣ್ಣೀರು ಬತ್ತಿಲ್ಲ. ಜನರ ಎದೆಯಲ್ಲಿ ಉಂಟಾದ ಕಂಪನದ ಅಲೆ ಇನ್ನೂ ನಿಂತಿಲ್ಲ. 170ಕ್ಕೂ ಅಧಿಕ ಜೀವಗಳನ್ನು ಈ ಸಂದರ್ಭದಲ್ಲಿ ಉಗ್ರರು ಬಲಿತೆಗೆದುಕೊಂಡರು. ಕೋಟ್ಯಂತರ ರೂ. ನಷ್ಟವುಂಟಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾದ ಹೇಮಂತ್ ಕರ್ಕರೆ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳು ಈ ಸಂದರ್ಭದಲ್ಲಿ ಬರ್ಬರವಾಗಿ ಕೊಲೆಯಾದರು.
ದೇಶವನ್ನು ಮಾತ್ರವಲ್ಲ, ವಿಶ್ವವನ್ನೇ ಬೆಚ್ಚಿ ಬೀಳಿಸಿದ ಈ ಭೀಕರ ದಾಳಿಗೆ ಪ್ರತಿಯಾಗಿ ನಮ್ಮ ಮುಂದಿರುವುದು ಒಬ್ಬನೇ ಒಬ್ಬ ಕಸಬ್. ನವೆಂಬರ್ 26 ಈ ಭೀಕರ ದುರಂತಕ್ಕೆ ಒಬ್ಬ ಕಸಬ್ ನ್ಯಾಯ ದೊರಕಿಸಬಲ್ಲನೆ? ಇಂದೋ ನಾಳೆಯೋ ನಾವು ಈ ಕಸಬ್‌ನನ್ನು ಗಲ್ಲುಕಂಬಕ್ಕೇರಿಸಲಿದ್ದೇವೆ. ಅಷ್ಟಕ್ಕೇ ನವೆಂಬರ್ 26 ನ್ಯಾಯವನ್ನು ಪಡೆದುಕೊಳ್ಳುತ್ತದೆಯೆ? ನಾವು ಕಳೆದ ಎರಡು ವರ್ಷಗಳನ್ನು ಬರೇ ಮಾತುಗಳಲ್ಲೇ ಕಳೆದಿದ್ದೇವೆ.
ಹೆಚ್ಚೆಂದರೆ ಪಾಕಿಸ್ತಾನವನ್ನು ಟೀಕಿಸಿದ್ದೇವೆ. ಹೆಡ್ಲಿಯನ್ನು ಭಾರತಕ್ಕೆ ಒಪ್ಪಿಸುವಂತೆ ಮನವಿ ಮಾಡಿದ್ದೇವೆ. ಆದರೆ ಇದರಾಚೆಗೆ, ನವೆಂಬರ್ 26ರ ಹುತ್ತವನ್ನು ಬಗೆಯುವುದಕ್ಕೆ ನಮ್ಮಿಂದ ಸಾಧ್ಯವಾಗಿಲ್ಲ. ಕಸಬ್ ಎಂಬ ಸತ್ತ ಹಾವನ್ನು ಮತ್ತೊಮ್ಮೆ ಗಲ್ಲಿಗೇರಿಸಿ ನಮ್ಮನ್ನು ನಾವು ಸಂತೋಷ ಪಡಿಸಿಕೊಳ್ಳುವುದು ಬಿಟ್ಟರೆ ನಮ್ಮ ಕೈಯಲ್ಲಿ ಇನ್ನೇನೂ ಇಲ್ಲವೆ? ಭಾರತವೆನ್ನುವ ಸುಪರ್ ಪವರ್ ರಾಷ್ಟ್ರ ಇಷ್ಟೂ ಅಸಹಾಯಕವೆ?
ನವೆಂಬರ್ 26ರಂದು ಉಗ್ರರು ದಾಳಿ ನಡೆಸಿ ನಮ್ಮ ಭಯೋತ್ಪಾದಕ ನಿಗ್ರಹ ಅಧಿಕಾರಿಗಳನ್ನೇ ಸಾಲು ಸಾಲಾಗಿ ಗುಂಡಿಟ್ಟು ಕೊಲ್ಲುವ ಮೂಲಕ ಅಂದು ಭಯವನ್ನಷ್ಟೇ ಸೃಷ್ಟಿಸಿದ್ದಲ್ಲ. ಭಾರತದಲ್ಲಿ ಆವರೆಗೆ ನಡೆದ ಒಂದು ದೊಡ್ಡ ಭಯೋತ್ಪಾದಕ ಕೃತ್ಯ ಮತ್ತು ಭಾರೀ ಸಂಚುಗಳನ್ನು ಮುಚ್ಚಿ ಹಾಕುವ ಪ್ರಯತ್ನವನ್ನೂ ನಡೆಸಿದರು. ಒಂದು ರೀತಿಯಲ್ಲಿ ವಿದೇಶಿ ಮತ್ತು ಸ್ವದೇಶಿ ಉಗ್ರರು ಜೊತೆ ಸೇರಿ ಆ ದಾಳಿಯನ್ನು ನಡೆಸಿದರು. ಎಟಿಎಸ್‌ನ ಹಿರಿಯ ಅಧಿಕಾರಿಗಳು ನೆಲಕಚ್ಚುವುದರಿಂದ ವಿದೇಶಿ ಉಗ್ರರಷ್ಟೇ ಅಲ್ಲ, ಈ ನೆಲದ ಸನಾತನ ಉಗ್ರರೂ ವಿಜಯೋತ್ಸವವನ್ನು ಆಚರಿಸಿದರು.
ಆದರೆ ದುರದೃಷ್ಟವಶಾತ್, ನಾವಿಂದು ನವೆಂಬರ್ 26ರ ದಾಳಿಯನ್ನು ಸಮಗ್ರವಾಗಿ ನೋಡುತ್ತಿದ್ದೇವೆಯೇ ಹೊರತು, ಹೇಮಂತ್ ಕರ್ಕರೆ ಮತ್ತು ಅವರ ಬಳಗದ ಕಗ್ಗೊಲೆಯ ಕುರಿತಂತೆ ಪ್ರತ್ಯೇಕ ದೃಷ್ಟಿಯನ್ನು ಹೊರಳಿಸುವುದಕ್ಕೆ ಹಿಂದೇಟು ಹಾಕುತ್ತಿದ್ದೇವೆ. ಆದುದರಿಂದಲೇ, ಇಂದು ನಾವು ಒಬ್ಬ ಕಸಬ್‌ನಲ್ಲೇ ತೃಪ್ತಿ ಪಡಬೇಕಾಗಿದೆ. ಕರ್ಕರೆ ಮತ್ತು ಬಳಗದ ಕೊಲೆಯ ಹಿಂದಿರುವ ಆರೋಪಿಗಳು ಈ ಕಸಬ್‌ನನ್ನು ಮುಂದಿಟ್ಟು ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ ಅಥವಾ ಹೊಸ ಭಯೋತ್ಪಾಕ ಕೃತ್ಯಗಳಿಗೆ ಯೋಜನೆ ರೂಪಿಸುವುದರಲ್ಲಿ ತಲ್ಲೀನರಾಗಿದ್ದಾರೆ.
ನಿಜ. ನವೆಂಬರ್ 26ರಂದು ನಡೆದ ನಾಗರಿಕರ ಕಗ್ಗೊಲೆಗಳೇ ಒಂದು ಭಾಗವಾಗಿದ್ದರೆ, ಕರ್ಕರೆ ಮತ್ತು ಬಳಗ ಹತ್ಯೆ ಇನ್ನೊಂದು ಭಾಗವಾಗಿದೆ. ಈ ಅಧಿಕಾರಿಗಳನ್ನು ಕೊಂದು ಹಾಕುವ ಸಂದರ್ಭದ ಬಲಿಪಶುವಾಗಿದ್ದಾರೆ ಉಳಿದ ನಾಗರಿಕರು. ಆದುದರಿಂದ, ಕರ್ಕರೆಯ ಸಾವನ್ನು ನಾವು ಪ್ರತ್ಯೇಕವಾಗಿ ಗುರುತಿಸಬೇಕು ಮತ್ತು ಅದನ್ನು ಪ್ರತ್ಯೇಕವಾಗಿ ತನಿಖೆಗೊಳಪಡಿಸಬೇಕು. ಕರ್ಕರೆಯ ಕಗ್ಗೊಲೆಯ ಕುರಿತಂತೆ ಅನುಮಾನ ಪಡುವುದಕ್ಕೆ ಸಾಕಷ್ಟು ಆಧಾರಗಳಿವೆ. ಮಾಲೆಗಾಂವ್ ಸ್ಫೋಟದ ಹಿಂದಿರುವ ಸಂಘಪರಿವಾರದ ಭಯೋತ್ಪಾದಕರನ್ನು ಹುತ್ತದಿಂದ ಹೊರಹಾಕಿದ್ದು ಇದೇ ಹೇಮಂತ್ ಕರ್ಕರೆ ಬಳಗ.
ಮಾಲೆಗಾಂವ್ ಸ್ಫೋಟದ ಉಗ್ರಗಾಮಿಗಳು ಬೆಳಕಿಗೆ ಬಂದಂತೆ, ದೇಶದ ಭಯೋತ್ಪಾದನಾ ಚಟುವಟಿಕೆಗೆ ಇನ್ನೊಂದು ಆಯಾಮ ದೊರಕಿತು. ಈವರೆಗಿನ ಉಗ್ರರದ್ದು ವಿದೇಶಿ ಮೂಲವಾಗಿದ್ದರೆ, ಇವರು ಈ ನೆಲದಲ್ಲಿದ್ದೇ ನೆಲಕ್ಕೆ ದ್ರೋಹ ಬಗೆದವರಾಗಿದ್ದರು. ಕರ್ಕರೆ ಬಳಗ ಇವರ ಒಂದೊಂದೇ ಸಂಚನ್ನು ಹೊರಗೆಡಹುತ್ತಿದ್ದಂತೆಯೇ ಇವರಿಗೆ ಜೀವ ಬೆದರಿಕೆ ಬರ ತೊಡಗಿತು. ಸಂಘಪರಿವಾರದ ಮುಖಂಡರು ಇದನ್ನು ಬಹಿರಂಗವಾಗಿಯೇ ಘೋಷಿಸತೊಡಗಿದರು.
ಇಂತಹ ಸಂದರ್ಭದಲ್ಲಿ ಮುಂಬೈ ದಾಳಿ ಎನ್ನುವಂತಹ ನಾಟಕೀಯ ಘಟನೆ ನಡೆಯಿತು. ಈ ಘಟನೆಯಲ್ಲಿ ಅತ್ಯಂತ ಹಾಸ್ಯಾಸ್ಪದ ರೀತಿಯಲ್ಲಿ ಮತ್ತು ಬರ್ಬರವಾಗಿ ಕರ್ಕರೆ ಮತ್ತು ಅವರ ಸಹೋದ್ಯೋಗಿಗಳು ಕೊಲ್ಲಲ್ಪಟ್ಟರು. ಆದರೆ ಇಂದಿಗೂ ಇದನ್ನು ಪ್ರತ್ಯೇಕವಾಗಿ ತನಿಖೆ ನಡೆಸುವುದಕ್ಕೆ ನಮ್ಮ ಆಡಳಿತ ಮುಂದಾಗಿಲ್ಲ. ಯಾಕೆ?
ಸಾಧಾರಣವಾಗಿ ಉಗ್ರರು ಜನಸಾಮಾನ್ಯರನ್ನು ಗುರಿಯಾಗಿಸಿ ತಮ್ಮ ದಾಳಿಯನ್ನು ನಡೆಸುತ್ತಾರೆ. ಈ ಮೂಲಕ ಅಭದ್ರ ವಾತಾವರಣವನ್ನು ಸೃಷ್ಟಿಸುತ್ತಾರೆ. ಆದರೆ ನವೆಂಬರ್ 26ರಂದು ನಡೆದಿರುವುದು ಭಿನ್ನ ದಾಳಿ. ಈ ದಾಳಿಯಲ್ಲಿ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳನ್ನು ಕೊಂದು ಹಾಕಲಾಗಿದೆ. ಅದೂ, ಈ ದೇಶದ ಭಯೋತ್ಪಾದನೆಯ ಇನ್ನೊಂದು ಮುಖವನ್ನು ಬಹಿರಂಗ ಪಡಿಸಿದ ನಿರ್ದಿಷ್ಟ ಅಧಿಕಾರಿಗಳನ್ನೇ. ಉಗ್ರರು ಈ ಮೂಲಕ, ನಿಮ್ಮ ಅಧಿಕಾರಿಗಳನ್ನೇ ಕೊಂದು ಹಾಕುತ್ತೇವೆ, ನೀವೇನು ಮಾಡುತ್ತೀರಿ? ಎಂದು ಪ್ರಶ್ನೆ ಎಸೆದಿದ್ದಾರೆ.
ಆದರೆ ಈ ಪ್ರಶ್ನೆಗೆ ಸಮರ್ಥ ಉತ್ತರವನ್ನು ನೀಡಲು ನಾವು ಈವರೆಗೆ ವಿಫಲರಾಗಿದ್ದೇವೆ. ಬರೇ, ಕಸಬ್ ಎಂಬ ಸತ್ತ ಹಾವನ್ನು ಹಿಡಿದುಕೊಂಡು ಎರಡು ವರ್ಷ ಬಡಿಯುತ್ತಾ ಬಂದಿದ್ದೇವೆ. ಇನ್ನಾದರೂ ನವೆಂಬರ್ 26ರ ದುರ್ಘಟನೆ ಮರು ತನಿಖೆಗೆ ಒಳಪಡಬೇಕು. ತನಿಖೆಯ ಕೇಂದ್ರ ಬಿಂದು ತಾಜ್ ದಾಳಿಯಲ್ಲ.
ಹೇಮಂತ್ ಕರ್ಕರೆ ಮತ್ತು ಅವರ ಬಳಗದ ಹತ್ಯೆಯೇ ತನಿಖೆಯ ಕೇಂದ್ರ ವಸ್ತುವಾಗಬೇಕು. ಅವರ ಸಾವು ಆಕಸ್ಮಿಕವೋ, ಅಥವಾ ಒಂದು ಮಹತ್ವದ ತನಿಖೆಯನ್ನು ಮುಚ್ಚು ಹಾಕಲು ನಡೆಸಿದ ಸಂಚೋ ಎನ್ನುವುದು ಬಹಿರಂಗಕ್ಕೆ ಬರಬೇಕು. ಆಗ ಮಾತ್ರ ನಾವು ಸಂತ್ರಸ್ತರಿಗಾಗಿ ಹಚ್ಚುವ ಮೊಂಬತ್ತಿ ಅವರ ಆತ್ಮಕ್ಕೆ ಶಾಂತಿಯನ್ನು ನೀಡೀತು.
No comments:
Post a Comment